ಬೆಂಗಳೂರು: ಸಂಸದರು ಕೇಂದ್ರದ ಬಳಿ ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ದಕ್ಷಿಣದಲ್ಲಿ ಇದಾನಲ್ಲ ಅಮವಾಸ್ಯೆ ತೇಜಸ್ವಿ ಸೂರ್ಯ (Tejaswi Surya) ಕೂಡ ಕೇಂದ್ರದ ಬಳಿ ಹಣ ಕೇಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೈಟ್‌ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿ.ವಿ.ಕೆ ಐಯ್ಯಂಗಾರ್ ರಸ್ತೆಯ ಆರ್.ಟಿ ಸ್ಟ್ರೀಟ್ ಜಂಕ್ಷನ್‌ನಲ್ಲಿ ಭೂಮಿ ಪೂಜೆ ನೆರವೇರಿಸಿದರು.ಇದನ್ನೂ ಓದಿ: ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ
ಬಳಿಕ ಮಾತನಾಡಿದ ಅವರು, ಸಂಸದರು ಕರ್ನಾಟಕಕ್ಕೆ ಕೊಡಬೇಕಾದ ದುಡ್ಡು ಕೇಳಲ್ಲ, ಪಿಸಿ ಮೋಹನ್ ಕೇಳಲಿಲ್ಲ, ಅವನು ಯಾರು ಸೌತ್ ಅಲ್ಲಿ ಇದಾನಲ್ಲ ಅಮಾವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದ ಬಳಿ ಹಣ ಕೇಳಲಿಲ್ಲ, ಆಯಮ್ಮ ಶೋಭಾ ಕರಂದ್ಲಾಜೆ ಕೂಡ ಹಣ ತರಲ್ಲ. ಮಂತ್ರಿ ಆಗಿರುವ ಕುಮಾರಸ್ವಾಮಿ ಕೂಡ ಕೇಂದ್ರದ ಬಳಿ ಹಣ ಕೇಳಿಲ್ಲ. ಅದಕ್ಕೆ ಕುಮಾರಸ್ವಾಮಿ ಸೇರಿ ಎಲ್ಲ ಎಂಪಿಗಳನ್ನು ಸೋಲಿಸಿ ಎಂದು ಕರೆ ನೀಡಿದರು.
ಪ್ರಧಾನಿ ಮೋದಿಗೆ ಕರ್ನಾಟಕದ ಮೇಲೆ ದ್ವೇಷವಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣ ಬರಲ್ಲ. ನಾವು ಕೊಟ್ಟ ತೆರಿಗೆ ಹಣವೂ ವಾಪಸ್ ಕೊಡಲ್ಲ. ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಒಂದು ರೂಪಾಯಿ ಕೊಡ್ತೇವೆ. ಆದರೆ ನಮಗೆ ಕೇಂದ್ರದಿಂದ 14-15 ಪೈಸೆ ತೆರಿಗೆ ವಾಪಾಸ್ ಬರುತ್ತದೆ ಅಷ್ಟೇ. ಇನ್ನೂ ಬಿಜೆಪಿಯವರು ಕೇಂದ್ರದ ಹಣ ಅಂತಾರೆ. ಬಿಜೆಪಿಯವರು ಜಿಎಸ್‌ಟಿ ಇಳಿಕೆಯನ್ನ ದೀಪಾವಳಿ ಗಿಫ್ಟ್ ಅಂತಾ ಬ್ಯಾನರ್ ಹಾಕಿಕೊಳ್ಳುತ್ತಾರೆ. ಎಂಟು ವರ್ಷ ತೆರಿಗೆ ವಸೂಲಿ ಮಾಡಿ ಈಗ ದೀಪಾವಳಿ ಗಿಫ್ಟ್ ಅಂತೆ. ಯಾವ ದೀಪಾವಳಿ ಗಿಫ್ಟ್ ಅಪ್ಪ ಇದು ಎಂದು ಟಾಂಗ್ ಕೊಟ್ಟರು.
ಈ ವೇಳೆ ಗಾಂಧಿನಗರ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಯೋಜನೆ ಇಲಾಖೆ ಸಚಿವರಾದ ಡಿ. ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್, ಶಾಸಕರಾದ ವೆಂಕಟೇಶ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಇದನ್ನೂ ಓದಿ: ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್!