ಸಮ್ಮಿಶ್ರ ಸರ್ಕಾರಕ್ಕಿಂದು ವಿಶ್ವಾಸ ಪರೀಕ್ಷೆ- ಗೆಲುವಿನ ನಿರೀಕ್ಷೆಯಲ್ಲಿ ಸಿಎಂ ಕುಮಾರಸ್ವಾಮಿ

Public TV
2 Min Read

ಬೆಂಗಳೂರು: ಕಳೆದ ವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚಿಸುವ ಮುನ್ನವೇ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಹೊರನಡೆದಿದ್ರು. ಇವತ್ತು ಕುಮಾರಸ್ವಾಮಿ ಸರದಿ. ವಿಧಾನಸೌಧದ ಮುಂದೆ 25ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಚ್‍ಡಿ ಕುಮಾರಸ್ವಾಮಿ ಇಂದು ವಿಧಾನಸೌಧದ ಒಳಗೆ ವಿಶ್ವಾಸಮತ ಪರೀಕ್ಷೆ ಎದುರಿಸಲಿದ್ದಾರೆ.

ಮಧ್ಯಾಹ್ನ 12.15ಕ್ಕೆ ವಿಧಾನಸಭೆ ವಿಶೇಷ ಅಧಿವೇಶನ ಆರಂಭವಾಗಲಿದೆ. ಈಗಾಗಲೇ 221 ಶಾಸಕರ ಪ್ರಮಾಣವಚನ ಪ್ರಕ್ರಿಯೆ ನಡೆದಿದ್ದು, ಇಂದು ನೇರವಾಗಿ ಸದನದಲ್ಲಿ ಎಚ್‍ಡಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡನೆಯಾಗಲಿದೆ. ಬಳಿಕ ಸದನದಲ್ಲಿ ಬಹುಮತ ಸಾಬೀತುಪಡಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕೊಡಲಿದ್ದಾರೆ.

ಈಗಾಗಲೇ ಜೆಡಿಎಸ್‍ನ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಮುಖ್ಯಸಚೇತಕ ನೇಮಕವಾಗಿಲ್ಲದ ಕಾರಣ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಎಚ್‍ಡಿ ಕುಮಾರಸ್ವಾಮಿಯವ್ರೇ ವಿಪ್ ಜಾರಿ ಮಾಡಿದ್ದಾರೆ. ಇನ್ನು ಗುರುವಾರ ನಡೆದ ಕಾಂಗ್ರೆಸ್‍ನ ಶಾಸಕಾಂಗ ಪಕ್ಷದ ಸಭೆಯಲ್ಲಿ 78 ಶಾಸಕರಿಗೂ ವಿಧಾನಪರಿಷತ್ ಮುಖ್ಯಸಚೇತಕ ಐವಾನ್ ಡಿಸೋಜಾ ವಿಪ್ ಜಾರಿ ಮಾಡಿದ್ದಾರೆ. ಇಂದು ವಿಶ್ವಾಸಮತ ಸಾಬೀತುಪಡಿಸಿದ್ರೆ ಇನ್ನು 6 ತಿಂಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಗಮವಾಗಿ ಕಾರ್ಯ ನಿರ್ವಹಿಸಲಿದೆ.

ವಿಶ್ವಾಸಮತ ಗೆಲುವಿಗೆ ಕನಿಷ್ಠ 111 ಸದಸ್ಯರ ಬೆಂಬಲ ಬೇಕು. ಕಾಂಗ್ರೆಸ್ ಸದಸ್ಯರ ಬಲ- 78, ಜೆಡಿಎಸ್ ಬಲ- 37 ಇರಬೇಕು. ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಮೈತ್ರಿಕೂಟದ ಬಲ 117 ಹಾಗೂ ಬಿಜೆಪಿ ಶಾಸಕರ ಸಂಖ್ಯಾಬಲ 104 ಇರಬೇಕು. ಒಟ್ಟಿನಲ್ಲಿ ಮೈತ್ರಿಕೂಟ ಸೋಲಿಸಲು ಬಿಜೆಪಿಗೆ ಕನಿಷ್ಠ 7 ಶಾಸಕರ ಬೆಂಬಲ ಬೇಕು.

ಬಹುಮತ ಸಾಬೀತು ಬಳಿಕ ಸಚಿವ ಸಂಪುಟ ರಚನೆ ಪ್ರಕ್ರಿಯೆ ಆರಂಭವಾಗಲಿದ್ದು, ಮಂತ್ರಿಗಿರಿಗಾಗಿ ಶಾಸಕರ ಲಾಬಿ ತೀವ್ರಗೊಂಡಿದೆ. ಸಚಿವ ಸ್ಥಾನ ಸಿಗದೇ ಇದ್ದವರು ಬಿಜೆಪಿ ಕಡೆಗೆ ವಾಲುವ ಭೀತಿ ಇರುವುದರಿಂದ 2 ಸ್ಥಾನ ಉಳಿಸಿಕೊಳ್ಳುವ ತಂತ್ರಗಾರಿಕೆಗೆ ಕಾಂಗ್ರೆಸ್ ಮುಂದಾಗಿದೆ. ಡಿಸಿಎಂ ಪಟ್ಟ ಸಿಗದ ಕಾರಣಕ್ಕೆ ಈಗಾಗಲೇ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಶಾಸಕರೂ ಅವರ ಬೆನ್ನಿಗೆ ನಿಂತಿದ್ದಾರೆ.

ಇಂದು ಸಂಜೆ 19 ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿರುವ ಕಾಂಗ್ರೆಸ್ ನಾಯಕರು ಹೈಕಮಾಂಡ್ ಜೊತೆ ಚರ್ಚಿಸಿ, ಖಾತೆ ಹಂಚಿಕೆ ಕುರಿತು ತೀರ್ಮಾನಕ್ಕೆ ಬರಲಿದ್ದಾರೆ. ಈ ಮಧ್ಯೆ ಸಚಿವರ ಅವಧಿಯನ್ನು 2 ವರ್ಷಕ್ಕೆ ಸೀಮಿತಗೊಳಿಸುವ ಸೂತ್ರದ ಬಗ್ಗೆಯೂ ಕಾಂಗ್ರೆಸ್‍ನಲ್ಲಿ ಚರ್ಚೆ ನಡೆಯುತ್ತಿದೆ. ಇನ್ನು ಜೆಡಿಎಸ್‍ನಲ್ಲೂ ಸಂಪುಟ ವಿಸ್ತರಣೆ ಕರಸತ್ತು ಆರಂಭವಾಗಿದ್ದು, ಎಚ್‍ಡಿ ದೇವೇಗೌಡರು ಸಿಎಂ ಕುಮಾರಸ್ವಾಮಿ ಜೊತೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *