ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಿಎಂ ವೀಡಿಯೋ ಸಂವಾದ

Public TV
2 Min Read

“ಅಂಗನವಾಡಿಯಲ್ಲಿ ಕೊಡುವ ಆಹಾರಧಾನ್ಯ ಚೆನ್ನಾಗಿರ್ತಾವೋ, ಇಲ್ಲವೋ?”
“ಚೆನ್ನಾಗಿದೆ ಸರ್”
“ನೀ ನಿಜ ಹೇಳಮ್ಮ; ಚೆನ್ನಾಗಿರಲಿಲ್ಲ ಅಂದ್ರೆ ಸರಿಪಡಿಸೋಣ”
“ಇಲ್ಲ; ಚೆನ್ನಾಗಿದೆ ಸರ್”
-ಇಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೋಷಣ್ ಅಭಿಯಾನದ ಫಲಾನುಭವಿ ಕಾವ್ಯ ನಡುವಿನ ಸಂಭಾಷಣೆ ಇದಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು.

ಪೋಷಣ್ ಅಭಿಯಾನದ ಫಲಾನುಭವಿ ಕಾವ್ಯ ಅವರು ಅಂಗನವಾಡಿಯಲ್ಲಿ ನೀಡುವ ಪೌಷ್ಟಿಕ ಆಹಾರದಿಂದ ಅನುಕೂಲವಾಗಿದೆ. ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನವನ್ನೂ ಮಾಡುತ್ತಾರೆ ಎಂದು ಮನದುಂಬಿ ಹೇಳಿದರು. ಕೋವಿಡ್ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆಗೇ ಪೌಷ್ಟಿಕ ಆಹಾರಧಾನ್ಯಗಳನ್ನು ತಲುಪಿಸಿದ್ದನ್ನೂ ಸ್ಮರಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು “ಆರೋಗ್ಯವಂತ ಮಕ್ಕಳಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯವೆಂದು ಮನಗಂಡು ಪ್ರಧಾನಿಯವರು ಈ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

ಪಿಎಂ ಸ್ವನಿಧಿ ಫಲಾನುಭವಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಲಕ್ಷ್ಮೀದೇವಿ ಅವರು ಕಳೆದ 18 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ ಎರಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಪಿಎಂ-ಸ್ವನಿಧಿ ಯೋಜನೆಯಡಿ ಮೊದಲಿಗೆ ಸಾಲ ಪಡೆದು ಹಿಂತಿರುಗಿಸಿದೆ. ಈಗ 20 ಸಾವಿರ ರೂ. ಸಾಲ ದೊರೆತಿದೆ. ಹಿಂದೆ ವ್ಯಾಪಾರದಲ್ಲಿ ಗಳಿಸಿದ ಲಾಭ ಬಡ್ಡಿಗೆ ಪಡೆದ ಸಾಲ ತುಂಬುವುದರಲ್ಲೇ ಸರಿ ಹೋಗುತ್ತಿತ್ತು. ಆದರೆ ಈ ಯೋಜನೆಯಿಂದ ತಮಗೆ ಉಳಿತಾಯವಾಗುತ್ತಿದೆ. ನಿಯಮಿತವಾಗಿ ಕಂತು ತುಂಬುತ್ತಿರುವುದಾಗಿ ತಿಳಿಸಿದರು. ಮುಂದಿನ ಹಂತದಲ್ಲಿ 50 ಸಾವಿರ ನೆರವು ದೊರೆಯಲಿದ್ದು, ಅದನ್ನು ಸದುಪಯೋಗ ಪಡೆದುಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಪಿಎಂ-ಕಿಸಾನ್ ಫಲಾನುಭವಿ ಆಂಜನೇಯ ಅವರು, ಈ ಯೋಜನೆಯ ಮೊತ್ತ ನಿಯಮಿತವಾಗಿ ಸದ್ದಿಲ್ಲದೇ ನಮ್ಮ ಖಾತೆಗೆ ಬಂದು ಬೀಳುತ್ತಿದೆ. ಯಾರ ಬಳಿಯೂ ಕೇಳದೆ, ಯೋಜನೆಯ ನೆರವು ನೇರವಾಗಿ ತಮ್ಮ ಖಾತೆಗೆ ಜಮೆಯಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ರೈತರು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ: ಅಮಿತ್ ಶಾ ಭರವಸೆ

ಪಿಎಂ ಆವಾಸ್ ಯೋಜನೆಯ ಫಲಾನುಭವಿ ಸುಮತಿ, ಮಾತೃವಂದನ ಯೋಜನೆಯ ಫಲಾನುಭವಿ ಲಾವಣ್ಯ, ಸ್ವಚ್ಛ ಭಾರತ ಮಿಷನ್ ಫಲಾನುಭವಿ ಕೊಪ್ಪಳದ ಹುಲಿಗೆಮ್ಮ ಮೊದಲಾದವರು ತಮಗೆ ಆಗಿರುವ ಅನುಕೂಲದ ಕುರಿತು ತೃಪ್ತಿ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ ಸ್ವಚ್ಛತೆಯಿಂದ ಹಿಡಿದು, ಬೀದಿ ಬದಿ ವ್ಯಾಪಾರದವರೆಗೆ ಬದುಕಿನ ಎಲ್ಲ ಆಯಾಮಗಳಲ್ಲಿ ನೆರವು ನೀಡಿ ಸ್ವಾಭಿಮಾನದ ಬದುಕು ನಡೆಸಲು ನರೇಂದ್ರ ಮೋದಿಯವರು ನೆರವು ನೀಡಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *