ಖಾತೆಗೋಸ್ಕರ ಕ್ಯಾತೆ ತೆಗೆಯಲ್ಲ- ಸುರೇಶ್ ಕುಮಾರ್

Public TV
1 Min Read

ಬೆಂಗಳೂರು: ನಾನು ಯಾವುದೇ ಖಾತೆಗೋಸ್ಕರ ಕ್ಯಾತೆ ತೆಗೆಯಲ್ಲ. ಅವರು ಕೊಟ್ಟ ಖಾತೆಯನ್ನು ಸರಿಯಾಗಿ ನಿಭಾಯಿಸುವ ವಿಶ್ವಾಸ ನನಗಿದೆ. ಈ ಮಧ್ಯೆ ನನ್ನದೊಂದು `ಸಕಾಲ’ ಅನ್ನೋ ಕನಸಿದೆ. ಆ ಕನಸಿನ ಕೂಸನ್ನು ಇನ್ನಷ್ಟು ಸದೃಢಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದು ಸುರೇಶ್ ಕುಮಾರ್ ಹೇಳಿದರು.

ಪಬ್ಲಿಕ್ ಟಿವಿ ಜೊತೆ ನಗರದಲ್ಲಿ ಮಾತನಾಡಿದ ಅವರು, ಇವತ್ತಿನ ಸನ್ನಿವೇಶದಲ್ಲಿ ಸಚಿವ ಸಂಪುಟ ರಚನೆ ಬಹಳ ಕಷ್ಟದ್ದಾಗಿದೆ. ಅಧಿಕಾರ ಸಿಕ್ಕರೆ ಒಂದು ಪೋರ್ಟ್ ಪೊಲಿಯೋ, ಇಲ್ಲದೇ ಇದ್ದರೆ ಎಲ್ಲ ಪೋರ್ಟ್ ಪೊಲೀಯೋ ನಮ್ಮದೇ ಎಂದು ನಾನು ನನ್ನ ಸ್ನೇಹಿತರ ಬಳಿ ತಮಾಷೆಯಾಗಿ ಹೇಳಿದ್ದೆ ಎಂದರು.

ರಾತ್ರಿ 11 ಗಂಟೆ 5 ನಿಮಿಷಕ್ಕೆ ಮುಖ್ಯಮಂತ್ರಿಗಳು ಕರೆ ಮಾಡಿ, ಮಂಗಳವಾರ ಬೆಳ್ಗಗೆ 10.30ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಬರಬೇಕು ಎಂದು ಹೇಳಿದರು. ಆಗ ಧನ್ಯವಾದಗಳು ಎಂದು ಅವರು ತಿಳಿಸಿದೆ.

ಇದೊಂದು ಅವಕಾಶ ಹಾಗೂ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜನಸಾಮಾನ್ಯರ ಆಶೋತ್ತರಕ್ಕೆ ಪ್ರತಿನಿಧಿಯಾಗಿ ಕಾರ್ಯ ಮಾಡಲು ನಾನು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಇದಕ್ಕೆ ರಾಜ್ಯದ ಎಲ್ಲ ಜನತೆಯ ಆಶೀರ್ವಾದವನ್ನು ನಾನು ಕೋರುತ್ತೇನೆ ಎಂದರು.

ಈ ಹಿಂದೆ ಕೊಟ್ಟ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ಈ ಬಾರಿ ಇದೇ ಖಾತೆ ಬೇಕು ಎಂಬ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಅವರು ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ನಾವೆಲ್ಲರೂ ಬಿಎಸ್‍ವೈ ಟೀಮ್ ಈ ಸಂಪುಟದಲ್ಲಿ ಅವರ ಟೀಮ್ ಇವರ ಟೀಮ್ ಎಂದೇನೂ ಇಲ್ಲ. ಆದರೆ ಕೆಲವೊಂದಿಷ್ಟು ಮಂದಿ ಅಪೇಕ್ಷೆ ಪಟ್ಟವರಿಗೆ ಸಿಕ್ಕಿಲ್ಲ ಅನ್ನೋದು ಅಷ್ಟೇ ನಿಜ. ಹೈಕಮಾಂಡ್ ಮಂತ್ರಿ ಸ್ಥಾನದ ವಿಚಾರದಲ್ಲಿ ಸಂಪೂರ್ಣ ಹಿಡಿತದಲ್ಲಿ ಹಿಡಿದುಕೊಂಡಿದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗೇನಿಲ್ಲ, ಇಲ್ಲಿಂದಲೂ ಒಂದು ಪಟ್ಟಿ ತೆಗೆದುಕೊಂಡಿದ್ದಾರೆ. ಆದರೆ ಈ ಬಾರಿ ತುಂಬಾ ಕೇರ್ ಫುಲ್ ಆಗಿರಬೇಕು ಅನ್ನುವ ಕಾರಣಕ್ಕೆ ಕೊಂಚ ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *