ಚುನಾವಣೆ ಬಳಿಕ ಮೊದಲ ಸಂಪುಟ ಸಭೆ – ವಿವಾದಕ್ಕೀಡಾಯ್ತು ಸರ್ಕಾರದ ನಿರ್ಣಯ

Public TV
1 Min Read

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ಸಭೆಯ ನಿರ್ಣಯ ವಿವಾದಕ್ಕೀಡಾಗಿದೆ.

ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಮತ್ತು ಕೇರೆಕೊಪ್ಪ ಗ್ರಾಮಗಳಲ್ಲಿ 3,666 ಎಕರೆ ಗಣಿ ಭೂಮಿಯನ್ನು ಜಿಂದಾಲ್ ಕಂಪನಿಗೆ ಕ್ರಯ ಮಾಡಿಕೊಡಲು ಸಂಪುಟ ಸಮ್ಮತಿ ನೀಡಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದೊಂದು ಹಗರಣ ಆಗುತ್ತೆ. ಸರ್ಕಾರದ ಪತನಕ್ಕೆ ಅಂತಿಮ ಕ್ಷಣ ಬಂದಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಕ್ಯಾಬಿನೆಟ್ ನಿರ್ಣಯ ಕೈಬಿಟ್ಟು, ಯೋಜನೆಯ ಷರತ್ತುಗಳನ್ನು ಬಹಿರಂಗ ಮಾಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಇತ್ತ ಮಾಜಿ ಸಿಎಂ ಮಾತಿಗೆ ತಿರುಗೇಟು ಕೊಟ್ಟಿರುವ ಸಚಿವ ಕೃಷ್ಣಭೈರೇಗೌಡ, 10 ವರ್ಷ ಭೂಮಿ ಗುತ್ತಿಗೆ ನೀಡಿ ನಂತರ ಕ್ರಯ ಮಾಡಿಕೊಡುವ ಒಪ್ಪಂದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿದೆ. ಇದರಲ್ಲಿ ಅಕ್ರಮ ನಡೆದಿರುವುದಾದರೆ ಜಗದೀಶ್ ಶೆಟ್ಟರ್ ಕಾಲದಲ್ಲೇ ನಡೆದಿರಬೇಕು ಎಂದಿದ್ದಾರೆ.

ಈ ನಡುವೆ ಸರ್ಕಾರ ನಡೆ ವಿರೋಧಿಸಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್.ಕೆ ಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಜಿಂದಾಲ್ ಕಂಪನಿ ಮೇಲೆ ಅಕ್ರಮ ಗಣಿಗಾರಿಕೆಯ ಹಲವಾರು ಆರೋಪಗಳಿವೆ. ಜೊತೆಗೆ ಜಿಂದಾಲ್‍ನಿಂದ ಎಂಎಸ್‍ಐಎಲ್‍ಗೆ 1,200 ಕೋಟಿ ಬಾಕಿ ಉಳಿಸಿಕೊಂಡಿದೆ. ಇಂಥ ಸಂಸ್ಥೆಯಿಂದ ಸರ್ಕಾರ ಬಾಕಿ ವಸೂಲು ಮಾಡಲಿ. ಅದು ಬಿಟ್ಟು ಇಷ್ಟು ದೊಡ್ಡ ಪ್ರಮಾಣದ ಸರ್ಕಾರಿ ಭೂಮಿ ಕ್ರಯ ನೀಡಲು ಮುಂದಾಗಿದ್ದು ಸರಿಯಲ್ಲ. ಇದರಿಂದ ಕೈಗಾರಿಕಾ ನೀತಿಗೂ ಅಡಚಣೆಯಾಗಲಿದೆ. ತಕ್ಷಣವೇ ಕ್ಯಾಬಿನೆಟ್ ನಿರ್ಣಯ ವಾಪಸ್ ಪಡೆಯಿರಿ ಅಂತ ಎಚ್‍ಕೆ ಪಾಟೀಲರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *