ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ

Public TV
1 Min Read

ನವದೆಹಲಿ:  ಕರ್ನಾಟಕ  ಉಪ ಚುನಾವಣೆ,  ಮಹಾರಾಷ್ಟ್ರ, ಹರ್ಯಾಣ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಿದರು.

ಕರ್ನಾಟಕದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಸೇರಿದಂತೆ ಎರಡು ರಾಜ್ಯಗಳಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ್,ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ.

2014ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿತ್ತು. ಹೀಗಾಗಿ ಯಾವೊಂದು ಪಕ್ಷ ಬಹುಮತ ಸಾಧಿಸಿರಲಿಲ್ಲ. ಬಹುಮತಕ್ಕೆ 145 ಸ್ಥಾನ ಬೇಕಿದ್ದು, ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42, ಶರದ್ ಪವಾರ್ ನೇತೃತ್ವದ ಎನ್‍ಸಿಪಿ 41 ರಲ್ಲಿ ಜಯಗಳಿಸಿತ್ತು. ಬಿಜೆಪಿ, ಶಿವಸೇನೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಪರಿಣಾಮ ಒಟ್ಟು 48 ರಲ್ಲಿ 41ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 5, ಇತರೇ ಎರಡು ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು.

2014ರ ಹರ್ಯಾಣ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳಿದ್ದು 47 ಸ್ಥಾನಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಇಂಡಿಯನ್ ನ್ಯಾಷನಲ್ ಲೋಕ್ ದಳ 19, ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಎಲ್ಲ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *