ಬಿಜೆಪಿ ಜೊತೆಗಿನ ಒಂಬತ್ತು ದಿನದ ಸಂಸಾರ ಚೆನ್ನಾಗಿದೆ: ಬಿ.ಸಿ.ಪಾಟೀಲ್

Public TV
2 Min Read

ಹಾವೇರಿ: ಬಿಜೆಪಿ ಬಂದು ಒಂಬತ್ತು ದಿನ ಆಗಿದೆ, ಸಂಸಾರ ತುಂಬಾ ಚೆನ್ನಾಗಿದೆ. ಅತ್ತೆ, ಮಾವ, ಸೊಸೆ, ಭಾವ, ಕಾಕಾ ಎಲ್ಲರೂ ಹೊಂದಿಕೊಳ್ಳುತ್ತಿದ್ದೇವೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಮಕರಿ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬಂದು ಇಂದಿಗೆ ಒಂಬತ್ತು ದಿನ ಆಗಿದೆ, ಸಂಸಾರ ತುಂಬಾ ಚೆನ್ನಾಗಿದೆ. ಅತ್ತೆ, ಮಾವ, ಸೊಸೆ, ಭಾವ, ಕಾಕಾ ಎಲ್ಲರೂ ಹೊಂದಿಕೊಳ್ಳುತ್ತಿದ್ದೇವೆ. ಕುಟುಂಬದಲ್ಲಿ ಒಳ್ಳೆಯ ಹೊಂದಾಣಿಕೆ ಇದೆ. ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮುಂದೆಯು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

17 ವರ್ಷಗಳಿಂದ ನಾನು ಬಣಕಾರ ಅವರ ಪ್ರತಿ ಸ್ಪರ್ಧಿಯಾಗಿ ಕೆಲಸ ಮಾಡಿದ್ದೆವು. ನಾವಿಬ್ಬರು ಒಂದಾದ ಮೇಲೆ ಕಾರ್ಯಕರ್ತರು ಯಾಕೆ ಎರಡು ಭಾಗವಾಗಿರಬೇಕು ಎಂದು ಒಂದಾಗುತ್ತಿದ್ದಾರೆ. ಒಬ್ಬರು ಇದ್ದಾಗ ಭಾರ ಹೆಚ್ಚಾಗಿತ್ತು. ಯು.ಬಿ.ಬಣಕಾರ ಬಂದ ಮೇಲೆ ಭಾರ ಕಡಿಮೆ ಅಗಿದೆ. ನನ್ನದೇ ಚುನಾವಣೆ ಎಂದು ಭಾವಿಸಿ ಅವರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಬಂದಿದ್ದರಿಂದ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು.

ಕಾಂಗ್ರೆಸ್ ಮುಳುಗುವ ಹಡಗು: ನಮ್ಮನ್ನು ಸೋಲಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾರು? ನಮ್ಮನ್ನು ಸೋಲಿಸುವುದು ಗೆಲ್ಲಿಸುವುದು ಜನರು. ಕುಮಾರಸ್ವಾಮಿಯವರು ಸರಿಯಾಗಿ ಆಡಳಿತ ಮಾಡಿದ್ದರೆ ಮಾಜಿ ಆಗುತ್ತಿರಲಿಲ್ಲ. ಸಿದ್ದರಾಮಯ್ಯ ದೊಡ್ಡವರು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದೀಗ ಗುಂಪುಗಾರಿಕೆ ಆಗಿದೆ. ಮೂಲ ಹಾಗೂ ವಲಸಿಗರು ಎಂದು ಎರಡು ಗುಂಪುಗಳಾಗಿವೆ. ಹೀಗಾಗಿ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು ಆಗಿದೆ ಎಂದು ಆರೋಪಿಸಿದರು.

ಮುಳುಗುತ್ತಿರುವ ಹಡಗನ್ನು ದಡ ಸೇರಿಸಬೇಕು ಎನ್ನುವವರು ಕಡಿಮೆ ಆಗಿದ್ದಾರೆ. ಎಷ್ಟೋ ಸಾಧ್ಯವೋ ಅಷ್ಟು ರಂಧ್ರ ಮಾಡಿ ಮುಳುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ. ಈಗ ಕಾಂಗ್ರೆಸ್ ಪಕ್ಷದ ಕಥೆ ಹಾಳು ಊರಿಗೆ ಆಳಿದವನೆ ಗೌಡ ಎನ್ನುವಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ಸಹ ಅದೇ ರೀತಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಿ.ಎಚ್.ಬನ್ನಿಕೋಡಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *