ಉಪಸಮರಕ್ಕೆ ಶಾಂತಿಯುತ ತೆರೆ – ಜಮಖಂಡಿಯಲ್ಲಿ ಅತೀ ಹೆಚ್ಚು, ಮಂಡ್ಯದಲ್ಲಿ ಕಡಿಮೆ ಮತದಾನ

Public TV
1 Min Read

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಗಿದ್ದು, ನವೆಂಬರ್ 6 ರಂದು ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಇತ್ತ ಎಲ್ಲೆಲ್ಲಿ ಎಷ್ಟೆಷ್ಟು ಮತದಾನ ಆಗಿದೆ? ಎಲ್ಲಿ ವೋಟ್ ಹೆಚ್ಚಾಗಿದ್ದರೆ ಲಾಭ? ಕಡಿಮೆಯಾದರೆ ಏನಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ ರಾಜಕೀಯ ನಾಯಕರು ಮುಳುಗಿದ್ದಾರೆ. ಈ ಕುರಿತು ಮಾಹಿತಿ ನೋಡುವುದಾದರೆ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಮತದಾನ ಆಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನ ಆಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು?
ಕಳೆದ ಮೂರು ವಾರಗಳಿಂದ ರಾಜಕೀಯ ರಣರಂಗವಾಗಿದ್ದ ಬಳ್ಳಾರಿಯಲ್ಲಿ ಸುಗಮ ಮತದಾನ ನಡೆದಿದ್ದು, ಆದರೆ ಮತದಾನದ ಪ್ರಮಾಣ ಕಡಿಮೆ ಆಗಿದೆ. ಮತದಾರರು ಮತಗಟ್ಟೆಗೆ ಬರಲು ಹೆಚ್ಚು ಉತ್ಸಾಹ ತೋರದ ಕಾರಣ ಶೇ.63.85 ರಷ್ಟು ಮತದಾನ ನಡೆದಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧಿಸಿರುವ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿಯೂ ಮತದಾನ ಪ್ರಮಾಣ ನಿರೀಕ್ಷೆಯಷ್ಟು ನಡೆಯದೇ ಶೇ. 61.05 ದಾಖಲಾಗಿದೆ. ಈ ನಡುವೆ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕೊನೆಯ ದಿನವೂ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಲ್ಲಿ ಒಮ್ಮತ ಮೂಡಲೇ ಇಲ್ಲ. ಈ ಗೊಂದಲದ ನಡುವೆ ಶೇ.53.93 ರಷ್ಟು ಮತದಾನ ನಡೆದಿದ್ದು, ಈ ಮೂಲಕ ಅತ್ಯಂತ ಕಡಿಮೆ ಮತದಾನವಾಗಿದೆ.

ವಿಧಾನಸಭೆ ಉಪಚುನಾವಣೆ ನಡೆದ ಕ್ಷೇತ್ರಗಳತ್ತ ಗಮನ ಹರಿಸಿದರೆ ಸಿಎಂ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ರಾಮನಗರದಲ್ಲಿ ವಿಚಿತ್ರ ಸನ್ನಿವೇಶದಲ್ಲಿ ಮತದಾನ ನಡೆಯಿತು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ 2 ದಿನಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ನಡುವೆ ಶೇ.71.88 ರಷ್ಟು ಆಗಿದೆ. ಸಿದ್ದು ನ್ಯಾಮಗೌಡ ಅವರ ಆಕಾಲಿಕ ಮರಣದಿಂದ ತೆರವಾಗಿದ್ದ ಜಮಖಂಡಿ ಕ್ಷೇತ್ರದಲ್ಲಿ ಅತ್ಯಧಿಕ 77.17ರಷ್ಟು ಮತದಾನ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *