ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶುಲ್ಕ ನಿಗದಿ – ಬಡ ವಿದ್ಯಾರ್ಥಿಗಳಿಗೆ ನೀಟ್ ಕೋಚಿಂಗ್

Public TV
1 Min Read

ಬೆಂಗಳೂರು: ಬಡತನದ ಕಾರಣಕ್ಕೆ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು 2022-23ನೇ ಸಾಲಿನ ಬಜೆಟ್ ಮೂಲಕ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಒದಗಿಸಲು ಸರ್ಕಾರ ನೆರವಾಗಲಿದೆ.

ಬಡಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲು ಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿ ನೀಡಲಾಗುವುದು. ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಎ, ಬಿ, ಸಿ ಮತ್ತು ಡಿ ಎಂದು ವರ್ಗೀಕರಿಸಿ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಶುಲ್ಕ ನಿಗದಿಪಡಿಸಲು ಕ್ರಮವಹಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಕ್ಯಾನ್ಸರ್ ಕೇಂದ್ರ:
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನಲ್ಲಿ ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವನ್ನು 50 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಸೌಕರ್ಯವನ್ನು ಒದಗಿಸಲು ಆಯ್ದ 10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಇನ್‌ಫ್ಯೂಷನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಮೈಸೂರು ಕೆ.ಆರ್. ಆಸ್ಪತ್ರೆ ನವೀಕರಣ:
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು 2024ರಲ್ಲಿ ಶತಮಾನೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಕೆ.ಆರ್. ಆಸ್ಪತ್ರೆಯ ಕಟ್ಟಡಗಳ ನವೀಕರಣವನ್ನು ಮುಂದಿನ ಮೂರು ವರ್ಷದಲ್ಲಿ 89 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *