Karnataka Budget 2024- ಬಜೆಟ್ ನಲ್ಲಿ ಬಂಗಾರದ ಮನುಷ್ಯ, ಡೇರ್ ಡೆವಿಲ್ ಮುಸ್ತಾಫಾ

Public TV
1 Min Read

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಮಂಡಿಸಿದ ಕರ್ನಾಟಕ ರಾಜ್ಯ ಬಜೆಟ್ 2024-25ರಲ್ಲಿ (Karnataka Budget 2024) ಕನ್ನಡ ಸಿನಿಮಾಗಳನ್ನು ಉಲ್ಲೇಖಿಸಿ, ತಮ್ಮ ಬಜೆಟ್ ಹಿರಿಮೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಯೋಜನೆಗಳನ್ನು ಪ್ರಸ್ತಾಪಿಸುವಾಗ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಡೈಲಾಗ್ ಅನ್ನು ನೆನಪಿಸಿಕೊಂಡಿದ್ದಾರೆ.

ಖ್ಯಾತ ಸಾಹಿತಿ  ಪೂರ್ಣಚಂದ್ರ ತೇಜಸ್ವಿ ಅವರ ಕೃತಿಯನ್ನು ಆಧರಿಸಿ, ಶಶಾಂಕ್ ನಿರ್ದೇಶನ ಮಾಡಿದ್ದ ಡೇರ್ ಡೆವಿಲ್ ಮುಸ್ತಾಫಾ (Dare Devil Mustafa) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಈ ಸಿನಿಮಾ ಕುರಿತಂತೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಈ ವರ್ಷದಲ್ಲಿ ಚಿತ್ರಕ್ಕೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಕೂಡ ಪ್ರಶಸ್ತಿ ನೀಡಿತ್ತು. ಈ ಚಿತ್ರದ ‘ಒಂದು ತೋಟದಲ್ಲಿ ನೂರು ಹೂವು ಅರಳಿ. ಎಲ್ಲಾ ಕೂಡಿ ಆಡುವಂಥ ಗಾಳಿ ಬೀಸಲಿ’ ಎನ್ನುವ ಸಂಭಾಷಣೆಯನ್ನು ಬಜೆಟ್ ನಲ್ಲಿ ಮುದ್ರಿಸಲಾಗಿದೆ.

ಇದೇ ಬಜೆಟ್ ನಲ್ಲೇ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ (Bangarada Manushya) ಸಿನಿಮಾವನ್ನೂ ಉಲ್ಲೇಖಿಸಿದ್ದಾರೆ ಸಿಎಂ ಸಿದ್ಧರಾಮಯ್ಯ. ಅಲ್ಪ ಸಂಖ್ಯಾತರು ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಬಂಗಾರದ ಮನುಷ್ಯ ಸಿನಿಮಾ ಗೀತೆಯೊಂದಿಗೆ ಬಜೆಟ್ ಆರಂಭಿಸಿದ್ದಾರೆ ಸಿಎಂ.

ಬಜೆಟ್ ಆರಂಭದಲ್ಲಿ ವಿರೋಧ ಪಕ್ಷದ ನಾಯಕರು ಉಪೇಂದ್ರ ನಟನೆಯ ‘ಏನಿಲ್ಲ ಏನಿಲ್ಲ..’ ಹಾಡನ್ನು ನೆನಪಿಸಿಕೊಂಡರು. ಏನಿಲ್ಲ ಏನಿಲ್ಲ ಬಜೆಟ್ ನಲ್ಲಿ ಏನಿಲ್ಲ ಎಂಬ ಹಾಡನ್ನು ಗುನುಗುವ ಮೂಲಕ ಬಜೆಟ್ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ.

Share This Article