ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

Public TV
3 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸಾಲದಿಂದ ಬೇಸತ್ತ ರೈತರಿಗೆ ಸಿಹಿ ¸ಸುದ್ದಿ ನೀಡಿದ್ದಾರೆ. ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ಹಲವು ಹೊಸ ಯೋಜನೆಗಳನ್ನ ಘೋಷಿಸಿದ್ದಾರೆ. 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಒಟ್ಟು 5,849 ಕೋಟಿ ರೂ. ಒದಗಿಸಲಾಗಿದೆ.

ಸತತ ಬರಗಾಲದಿಂದ ಕಂಗೆಟ್ಟ ರೈತರಿಗೆ ಸಾಲದ ಹೊರೆಯನ್ನು ಕೂಡಲೇ ಕಡಿಮೆಗೊಳಿಸಲು ಪ್ರಸಕ್ತ ವರ್ಷದಲ್ಲಿ ಸರ್ಕಾರ 8165 ಕೋಟಿ ರೂ. ವೆಚ್ಚದಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದೆ.

ಇದರಿಂದ ರಾಜ್ಯದಲ್ಲಿ 22,27,506 ರೈತರಿಗೆ ಅನುಕೂಲವಾಗಿದೆ. ಈ ಮೊತ್ತದ ಒಂದು ಭಾಗವನ್ನು ಈಗಾಗಲೇ ಪ್ರಸಕ್ತ ವರ್ಷದ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

ಸಾಲ ಮನ್ನಾ ಪ್ರಮುಖ ಅಂಶಗಳು ಹೀಗಿವೆ:
2015ರ ಸೆಪ್ಟೆಂಬರ್ 30ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿ ಮನ್ನಾ.
ಕಳೆದ 4 ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ. ಬಡ್ಡಿ ಮನ್ನಾ
2017ರ ಜೂನ್ 20ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ. ವರೆಗಿನ ಸಾಲ ಮನ್ನಾ.
ಇದರಿಂದ ರಾಜ್ಯದ 22,27,506 ರೈತರ ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಆಗಿದೆ.

ಹೊಸ ಯೋಜನೆಗಳು:
ಕೃಷಿ ಹೊಂಡಗಳು ಮತ್ತು ಪಾಲಿ ಹೌಸ್ ಗಳ ನಿರ್ಮಾಣ, ಮಣ್ಣು ಕಾರ್ಡ್ ವಿತರಣೆ.
ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ 90% ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಬಾಡಿಗೆಗೆ ನೀಡಿಕೆ, ಹಾಲು ಉತ್ಪಾದನಾ ಸಹಾಯಧನ.
ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ.
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ.
ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗ್ತಿದೆ. ಇದರ ಜೊತೆ 3% ಬಡ್ಡಿ ದರದಲ್ಲಿ 3 ರಿಂದ 10 ಲಕ್ಷದವರೆಗೆ ಸಾಲ.

ಖುಷ್ಕಿ ಭೂಮಿಯ ಸಂಕಷ್ಟಗಳನ್ನ ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರಂಭ.
2018-19ರಿಂದ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿ ವರ್ಷ ಪ್ರತಿ ರೈತನಿಗೆ ಗರಿಷ್ಠ 10 ಸಾವಿರ ರೂ.
ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ವರ್ಗಾವಣೆ.
ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ. ಖರ್ಚು, ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2018-19ನೇ ಸಾಲಿಗೆ ರಾಜ್ಯದ ಪಾಲು ಭರಿಸಲು 845 ಕೋಟಿ ರೂ. ಅನುದಾನ.
2018-19ನೇ ಸಾಲಿನಲ್ಲಿ ಸಿರಿಧಾನ್ಯಗಳ ವಿಸ್ತೀರ್ಣ 60 ಸಾವಿರ ಹೆಕ್ಟೇರ್‍ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ- 24 ಕೋಟಿ ರೂ. ಅನುದಾನ.
ನೆಲಗಡಲೆ ಬೆಳೆಯುವ ರೈತರಿಗೆ 50 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್.
ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ.
ಕೃಷಿ ಚಟುವಟಿಕೆ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ 2 ಲಕ್ಷ ರೂ.ಗೆ ದ್ವಿಗುಣ
ಹುಲ್ಲು ಮೆದೆ/ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವಾಗುವ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರ ದ್ವುಗುಣ- ಗರಿಷ್ಠ 20 ಸಾವಿರ ರೂ.
ಚಾಮರಾಜನಗರದಲ್ಲಿ ನೂತನ ಕರಷಿ ಕಾಲೇಜು ಸ್ಥಾಪನೆ.

Share This Article
Leave a Comment

Leave a Reply

Your email address will not be published. Required fields are marked *