ಸಂಭ್ರಮವಿಲ್ಲದೆ ಮಂಕಾದ ರಾಜ್ಯ ಬಿಜೆಪಿ ಕಚೇರಿ

Public TV
1 Min Read

ಬೆಂಗಳೂರು: ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಯಾವುದೇ ಸಂಭ್ರಮ ಕಾಣುತ್ತಿಲ್ಲ.

ಹೌದು. ಈ ಹಿಂದೆ ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶ ಸಮಯದಲ್ಲಿ ಬಿಜೆಪಿ ಕಚೇರಿ ಸಂಭ್ರಮದ ವಾತಾವರಣ ಕಂಡು ಬರುತಿತ್ತು. ಆದರೆ ಈ ಬಾರಿ ಅಲ್ಪ ಸಾಧನೆ ತೋರಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಪ್ರಮುಖರು ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನ ಕಡೆ ಮುಖ ಮಾಡಿಲ್ಲ.

ಅಲ್ಪ ಸಾಧನೆಯ ವಿಜಯೋತ್ಸವ ಆಚರಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸಹ ನಿರುತ್ಸಾಹ ತೋರಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಮೈತ್ರಿಕೂಟ 200ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದ್ದರೆ ಹರ್ಯಾಣದಲ್ಲಿ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎನ್ನುವ ಫಲಿತಾಂಶ ಪ್ರಕಟವಾಗಿತ್ತು. ಆದರೆ ಇಂದು ಫಲಿತಾಂಶ ಪ್ರಕಟವಾಗುತ್ತಿದ್ದು ಮಹಾರಾಷ್ಟ್ರ ಬಿಜೆಪಿ ಶಿವಸೇನೆ ಸರ್ಕಾರ ಸ್ಥಾಪನೆ ಮಾಡಿದ್ದರೂ ಬಿಜೆಪಿಗೆ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ.

ಹರ್ಯಾಣದ ಟ್ರೆಂಡ್ ಗಮನಿಸುವಾಗ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಒಟ್ಟು 90 ಕ್ಷೇತ್ರಗಳಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ 46 ಸದಸ್ಯರ ಬೆಂಬಲ ಬೇಕು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಸಿಗುವುದು ಅನುಮಾನ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

ದುಷ್ಯಂತ್ ಸಿಂಗ್ ಚೌತಾಲಾ ಅವರ ಜನನಾಯಕ್ ಜನತಾ ಪಕ್ಷ (ಜೆಜೆಪಿ) 10 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವುದರ ಜೊತೆ ಒಟ್ಟು 18 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದರಿಂದ ಫಲಿತಾಂಶ ಈಗ ದಿಢೀರ್ ತಿರುವು ಪಡೆದುಕೊಳ್ಳುತ್ತಿದೆ.

ಪಕ್ಷದ ಅಭ್ಯರ್ಥಿಗಳು ಮುನ್ನಡೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ದುಷ್ಯಂತ್ ಸಿಂಗ್ ಚೌತಾಲಾ ಪ್ರತಿಕ್ರಿಯಿಸಿ ಕಾಂಗ್ರೆಸ್, ಬಿಜೆಪಿ ಪೈಕಿ ಯಾರೇ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ನಾವೇ ನಿರ್ಣಯಕರು ಎಂದು ಹೇಳಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ದುಷ್ಯಂತ್ ಸಿಂಗ್ ಅವರಿಗೆ ಗಾಳ ಹಾಕಿದ್ದು ಡಿಸಿಎಂ ಸ್ಥಾನ ನೀಡುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *