ಬೆಂಗಳೂರು: ಗುಂಡಿಗಳಿರುವ ರಸ್ತೆಗಳನ್ನು ಸರಿಪಡಿಸಿಕೊಡಿ ಎಂದ ಐಟಿ-ಬಿಟಿ ಕಂಪನಿಗಳ ಬಗ್ಗೆ ಹಗುರವಾಗಿ ಮಾತಾಡಿದ ಡಿಕೆಶಿ ವಿರುದ್ಧ ಬಿಜೆಪಿ (BJP) ನಾಯಕರು ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ (Bengaluru) ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಮಾತನಾಡಿ, ಕಾಂಗ್ರೆಸ್‌ನವರಿಗೆ ಅಧಿಕಾರ ತಲೆಗೆ ಹತ್ತಿಬಿಟ್ಟಿದೆ. ಉದ್ಯಮಿಗಳು ಬೆಂಗಳೂರಿನ ಕುಂದುಕೊರತೆ ಹೇಳಿದಾಗ ಅದನ್ನು ಸಹಿಸಲ್ಲ. ಇವರು ಕಂಪನಿಗಳು ಬೇಕಿದ್ರೆ ಇರಬಹುದು, ಇಲ್ಲದಿದ್ರೆ ಹೋಗಬಹುದು ಅಂತಾರೆ. ಈ ದುರಹಂಕಾರದ ಮಾತು ಏಕೆ? ನಾನು ಉದ್ಯಮಿಗಳನ್ನು ಕರೆದು ಮಾತಾಡಲ್ಲ ಅಂತ ಅಹಂಕಾರದಿಂದ ಹೇಳ್ತಾರೆ. ಇದೇನು ಜನರ ಸರ್ಕಾರವೋ? ಖಾಸಗಿ ಸರ್ಕಾರವೋ? ಈ ಅಹಂಕಾರದ ಮಾತುಗಳನ್ನು ಬಿಟ್ಟು ಬಿಡಿ. ಬೆಂಗಳೂರು ಬಗ್ಗೆ ನಕಾರಾತ್ಮಕ ಸಂದೇಶ ಜಗತ್ತಿಗೆ ಹೋದರೆ ಯಾರೂ ಉದ್ದಿಮೆ ಮಾಡಲು ಬರಲ್ಲ. ಇಲ್ಲಿ ಉದ್ಯಮ ಸ್ಥಾಪಿಸಲು ಇವರ ಧೋರಣೆಯಿಂದ ಯಾರೂ ಬರಲ್ಲ. ಇರುವ ಉದ್ಯಮಗಳೂ ಬಿಟ್ಟು ಹೋಗುತ್ತವೆ. ಬುರುಡೆ ಮಾತು, ದುರಹಂಕಾರದ ಮಾತು ಬಿಟ್ಟು ಮೊದಲು ರಸ್ತೆಗಳನ್ನು ಸರಿ ಮಾಡಿ. ರಿಂಗ್‌ರಸ್ತೆ ಹಾಳಾಗಿ ಹೋಗಿದೆ, ಲೂಟಿ ಬಿಟ್ಟು ಅಭಿವೃದ್ಧಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಗೆರಿಲ್ಲಾ ಮಾದರಿ ಪೊಲಿಟಿಕಲ್ ಆಟ್ಯಾಕ್ – ಸಿಎಂ ಸೇರಿ ಹಲವರಿಗೆ ಶಾಕ್ ಕೊಟ್ಟ ಸಚಿವರ ಗುಂಪು
ಬೆಂಗಳೂರಿನ ಹಿತಕ್ಕಾಗಿ ಡಿಕೆಶಿ ಕೋಪ ತಡೆದುಕೊಳ್ಳೋದು ಒಳ್ಳೆಯದು. ಉದ್ಯಮಿಗಳ ಮೇಲೆ ಮನಬಂದಂತೆ ಮಾತಾಡಬೇಡಿ. ಬೆಂಗಳೂರಿನ ಮರ್ಯಾದೆ ಕಾಪಾಡಿ ಎಂದು ಟಾಂಗ್ ಕೊಟ್ಟರು.
ಇನ್ನೂ ಶಾಸಕ ಎಸ್.ಆರ್ ವಿಶ್ವನಾಥ್ ಮಾತಾಡಿ, ಡಿಕೆಶಿ ಉದ್ಯಮಿಗಳಿಗೆ ಧಮಕಿ ಹಾಕ್ತಾರೆ. ಅವರಿಗೆ ಮನವೊಲಿಸುವುದು ಗೊತ್ತಿಲ್ಲ. ಅವರ ಈ ಧೋರಣೆ ಅವರಿಗೇ ತಿರುಗುಬಾಣ ಆಗುತ್ತೆ. ಅವರಿಗೆ ಧಮ್ಕಿ ಹಾಕೋರು ಬಂದಾಗ ಬಹುಶ: ಅವರಿಗೆ ಅರ್ಥ ಆಗಬಹುದು. ಈ ರೀತಿ ಉದ್ಯಮಿಗಳ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಸಿ.ಕೆ ರಾಮಮೂರ್ತಿ ಅವರು ಮಾತನಾಡಿ, ಇನ್ನು ನಮ್ಮ ಉದ್ಯಮಿಗಳಿಗೆ ಬೇರೆ ಬೇರೆ ರಾಜ್ಯದವರು ಕರೆಯುತ್ತಿದ್ದಾರೆ. ಇನ್ನಾದರೂ ಸರ್ಕಾರ ಒಳ್ಳೆಯ ಬುದ್ಧಿ ಕಲಿತು ಬೆಂಗಳೂರಿನ ಅಭಿವೃದ್ಧಿ ಮಾಡಬೇಕು. ಡಿ.ಕೆ ಶಿವಕುಮಾರ್ ದುರಹಂಕಾರದಿಂದ ಮಾತನಾಡುತ್ತಾರೆ. ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಎಲ್ಲಾ ಸಾಫ್ಟ್ವೇರ್ ಕಂಪನಿಗಳನ್ನು ಕರೆದು ಮಾತನಾಡಿ ಎಂದು ಆಗ್ರಹಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತಾಡಿ, ಬ್ಲ್ಯಾಕ್‌ಬಕ್ ಕಂಪನಿ ಸಿಇಒ ಹೇಳಿದಾಗ ಎಚ್ಚೆತ್ತು ರಸ್ತೆಗಳ ಸುಧಾರಣೆ ಮಾಡಬೇಕಿತ್ತು. ಅದು ಬಿಟ್ಟು ಡಿಕೆಶಿಯವರು ತಿರಸ್ಕೃತ ರೀತಿಯಲ್ಲಿ ಅಹಂಕಾರದಿಂದ ಮಾತಾಡಿದ್ದಾರೆ. ಇದು ಒಳ್ಳೆಯದಲ್ಲ, ಬ್ಲ್ಯಾಕ್ ಬಕ್ ಕಂಪನಿಗೆ ಆಂಧ್ರ ಆಹ್ವಾನ ಕೊಟ್ಟಿದೆ. ಡಿಕೆಶಿ ಇರುವ ಕಂಪನಿಗಳನ್ನು ಉಳಿಸಿಕೊಂಡರೆ ಸಾಕು. ಹೊಸ ಕಂಪನಿಗಳನ್ನು ಅವರು ಕರೆದುಕೊಂಡು ಬರೋಕೆ ಆಗಲ್ಲ. ಇರುವುದನ್ನು ಉಳಿಸಿಕೊಳ್ಳಲಿ ಎಂದು ಕಿಡಿಕಾರಿದರು.ಇದನ್ನೂ ಓದಿ: ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು: ಸಿದ್ದರಾಮಯ್ಯ