ಜಮ್ಮು- ಕಾಶ್ಮೀರದಲ್ಲಿ ಕರ್ನಾಟಕ ಭವನ?

Public TV
1 Min Read

ನವದೆಹಲಿ: ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕರ್ನಾಟಕ ಭವನ ನಿರ್ಮಿಸಲು ರಾಜ್ಯ ಸರ್ಕಾರ ಉತ್ಸಾಹ ತೋರಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಅಧಿಕಾರಿಗಳ ಜೊತೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿರಂತರ ಮಾತುಕತೆ ನಡೆಯುತ್ತಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೇಂದ್ರವು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೂಡಲೇ ರಾಜ್ಯ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಐಷಾರಾಮಿ ಹೋಟೆಲ್ ನಿರ್ಮಾಣ ಮಾಡಲು ಪ್ರಸ್ತಾಪಿಸಿತ್ತು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಂದಿನ ಜಮ್ಮು-ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಆಶಯವನ್ನು ವಿವರಿಸಿದ್ದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಕರ್ನಾಟಕ ಭವನ ನಿರ್ಮಿಸಲು ಚಿಂತಿಸಿದ್ದು 10ರಿಂದ 15 ಎಕರೆ ಭೂಮಿಯನ್ನು ಖರೀದಿಸಲು ಸರ್ಕಾರ ಯೋಚಿಸಿದೆ. ಅಮರನಾಥ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಪದೇಪದೇ ತೆರಳುವ ಕರ್ನಾಟಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಭವನ ನಿರ್ಮಿಸಲು ಚಿಂತಿಸಲಾಗುತ್ತಿದ್ದು. ವಾಣಿಜ್ಯ ಉದ್ದೇಶಕ್ಕಿಂತ ಹೆಚ್ಚಾಗಿ, ಸಾರ್ವಜನಿಕರ ಸೇವೆ ಉದ್ದೇಶದಿಂದ ಭವನ ನಿರ್ಮಿಸಲಾಗುತ್ತಿದೆ. ಇಲ್ಲಿ ಗಣ್ಯರು ಸೇರಿದಂತೆ ರಾಜ್ಯಪಾಲರಿಗೂ ಕೊಠಡಿ ನಿರ್ಮಿಸುವ ಚಿಂತನೆಯಲ್ಲಿ ಪ್ರವಾಸೋದ್ಯಮ ಇಲಾಖೆ ಚಿಂತಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಕೆಲ ತಿಂಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಿದ ಹಿನ್ನೆಲೆ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಪಸ್ತಾಪ ನೆನೆಗುದಿಗೆ ಬಿದ್ದಿದ್ದೆ. ಮಾಹಿತಿಗಳ ಪ್ರಕಾರ ರಾಜ್ಯ ಸರ್ಕಾರದ ಪ್ರಸ್ತಾವನೆ ರಾಜ್ಯಪಾಲರ ಕಚೇರಿ ತಲುಪಿದ್ದು, ಆ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಗಳ ತಂಡ ಜಮ್ಮು-ಕಾಶ್ಮೀರಕ್ಕೆ ಭೇಟಿ ಮಾಡಲು ಚಿಂತಿಸಿದ್ದು ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಹಿನ್ನೆಲೆ ಹೊಸ ಪತ್ರವನ್ನು ಬರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Share This Article
Leave a Comment

Leave a Reply

Your email address will not be published. Required fields are marked *