ಗ್ರಾಹಕರಿಂದ ಒಂದೇ ಒಂದು ರೂ. ಹೆಚ್ಚಾಗಿ ಬೆಸ್ಕಾಂ ಪಡೆದಿಲ್ಲ: ಎಂಡಿ ರಾಜೇಶ್‍ಗೌಡ

Public TV
2 Min Read

– ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಲೋಪವಾಗಿಲ್ಲ

ಬೆಂಗಳೂರು: ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಲೋಪವಾಗಿಲ್ಲ. ಎರಡು ತಿಂಗಳ ಬಿಲ್ ಒಟ್ಟಿಗೆ ಬಂದಿರುವುದರಿಂದ ಗ್ರಾಹಕರಿಗೆ ಹೆಚ್ಚು ಅಂತ ಅನ್ನಿಸುತ್ತಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‍ಗೌಡ ಹೇಳಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಅವರು, ಬೆಸ್ಕಾಂ ಕರೆಂಟ್ ಬಿಲ್‍ನಲ್ಲಿ ಯಾವುದೇ ಅಕ್ರಮ ಆಗಿಲ್ಲ. ಗ್ರಾಹಕರಿಂದ ಒಂದೇ ಒಂದು ರೂಪಾಯಿ ಹೆಚ್ಚಾಗಿ ಬೆಸ್ಕಾಂ ತೆಗೆದುಕೊಂಡಿಲ್ಲ. ಕರೆಂಟ್ ಉಪಯೋಗಿಸದಿದ್ದರೂ ಫಿಕ್ಸೆಡ್ ಚಾರ್ಜ್ (ಮಿನಿಮಮ್) ಬಿಲ್ ಬಂದೇ ಬರುತ್ತದೆ. ಅದು ಕೂಡ ನಿಯಮದ ಅನ್ವಯ ಇರುತ್ತದೆ. ಕಂಪನಿಗಳ ವಿಚಾರದಲ್ಲೂ ಫಿಕ್ಸೆಡ್ ಚಾರ್ಜ್ ಬಂದೇ ಬರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್

ಮೀಟರ್ ರೀಡಿಂಗ್ ಅನ್ವಯ ಬಿಲ್ ಬಂದಿದೆ. ಗ್ರಾಹಕರು ಬಳಕೆ ಮಾಡಿದ ಯೂನಿಟ್‍ಗೆ ಬಿಲ್ ಬಂದಿದೆ. ಯೂನಿಟ್ ಬಳಕೆಯಲ್ಲಿ ಮೋಸ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕರೆಂಟ್ ಬಿಲ್ ಬಗ್ಗೆ ಯಾರಿಗಾದರು ಗೊಂದಲವಿದ್ದರೆ ಅವರು 1912 ನಂಬರಿಗೆ ಕರೆ ಮಾಡಿ ಪರಿಹಾರ ಮಾಡಿಕೊಳ್ಳಬಹುದು. ಯಾರಿಗೇ ಸಮಸ್ಯೆ ಇದ್ದರೂ ಅದನ್ನ ಪರಿಹಾರ ಮಾಡುತ್ತೇವೆ ಎಂದರು.

ಬಿಲ್ ಕಟ್ಟಿಲ್ಲ ಅಂದ್ರೆ ಜೂನ್‍ವರೆಗೂ ಯಾರಿಗೂ ಕರೆಂಟ್ ಕಟ್ ಮಾಡಲ್ಲ, ಈವರೆಗೂ ಮಾಡಿಲ್ಲ. ಕರೆಂಟ್ ಬಿಲ್ ಕಟ್ಟುವುಕ್ಕೆ ಬೇಕಾದ್ರೆ 3 ತಿಂಗಳ ಅವಕಾಶ ಕೊಡುತ್ತೇವೆ ಎಂದು ಹೇಳಿದರು.

ಉದ್ಯೋಗಿಗಳು, ಕಟ್ಟಡ, ವಾಹನ ಸಂಚಾರ, ದುರಸ್ತಿ ಸೇರಿದಂತೆ ಅನೇಕ ವಿಚಾರದಲ್ಲಿ ಬೆಸ್ಕಾಂ ಹಣ ವೆಚ್ಚ ಮಾಡುತ್ತದೆ. ಹೀಗಾಗಿ ಗ್ರಾಹಕರಿಂದ ಫಿಕ್ಸೆಡ್ ಚಾರ್ಜ್ ಪಡೆಯಲಾಗುತ್ತದೆ. ಉಳಿದ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಫಿಕ್ಸೆಡ್ ಚಾರ್ಜ್ ಪ್ರಮಾಣ ಅತಿ ಕಡಿಮೆ ಇದೆ ಎಂದು ತಿಳಿಸಿದರು.

ಲಾಕ್‍ಡೌನ್‍ನಿಂದಾಗಿ ಕಳೆದ ತಿಂಗಳು ಮನೆ ಮನೆಗೆ ಹೋಗಿ ಬಿಲ್ ಕೊಡಲು ಸಾಧ್ಯವಾಗಲಿಲ್ಲ. ನಮ್ಮ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಮೇ ನಲ್ಲಿ ಕರೆಂಟ್ ಬಿಲ್ ನೀಡಿದ್ದರಿಂದ ಗ್ರಾಹಕರಿಗೆ ಅದು ದೊಡ್ಡ ಮೊತ್ತವಾಗಿ ಕಾಣಿಸಿದೆ. ಹೀಗಾಗಿ ಇನ್ನುಮುಂದೆ ಗ್ರಾಹಕರ ಮೊಬೈಲ್ ನಂಬರ್ ಇಲ್ಲವೇ ಇಮೇಲ್ ಅಡ್ರೆಸ್ ಪಡೆದು ಆನ್‍ಲೈನ್ ಮೂಲಕ ಬಿಲ್ ನೀಡುವ ಹಾಗೂ ಹಣ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *