ರಾಜ್ಯದಲ್ಲಿ ಸದ್ದಿಲ್ಲದೆ ನಡೀತಿದ್ಯಾ ಮತಾಂತರ?- ಬೆಂಗ್ಳೂರು ಸೇರಿ 5 ಕಡೆ ಮತಾಂತರ ಯತ್ನ

Public TV
2 Min Read

– ಕಠಿಣ ಕಾನೂನು ಜಾರಿಗೆ ಸರ್ಕಾರ ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ಸದ್ದಿಲ್ಲದೇ ಮತಾಂತರ ಯತ್ನಗಳು ಪ್ರಕರಣಗಳು ಸದ್ದಿಲ್ಲದೇ ನಡೆಯುತ್ತಿವೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆಗೆ ಚಿಂತನೆ ನಡೆಸಿದ್ದೇವೆ ಎಂದು ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ್ದ ಕ್ರಿಶ್ಚಿಯನ್ ಪಾದ್ರಿಗಳ ನಿಯೋಗ, ನಾವು ಮತಾಂತರ ಮಾಡ್ತಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿ ಬೇಡ ಎಂದು ಮನವಿ ಮಾಡಿಕೊಂಡಿತ್ತು.

ಇದರ ನಡುವೆಯೂ ಕ್ರಿಶ್ಚಿಯನ್ ಮಿಷನರಿಗಳು, ಧರ್ಮ ಪ್ರಸಾರದ ನೆಪದಲ್ಲಿ ಬಡ ಮತ್ತು ಅಸಂಘಟಿತ ಸಮುದಾಯವನ್ನು ಟಾರ್ಗೆಟ್ ಮಾಡಿಕೊಂಡು, ಪ್ರಾರ್ಥನೆ ನೆಪದಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿವೆ ಎಂಬ ಗಂಭೀರ ಆಪಾದನೆ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಐದು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮತಾಂತರಕ್ಕೆ ಅವಕಾಶ ಕೊಡದಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಬಲವಂತದ ಮತಾಂತರ ತಡೆಗೆ ಕಾನೂನು ತರಲಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಭಾನುವಾರ ಯಾದಗಿರಿ ಜಿಲ್ಲೆಯ ಸೈದಾಪುರ ಸಮೀಪದ ನೀಲಹಳ್ಳಿಯಲ್ಲಿ ಮತಾಂತರ ಯತ್ನ ನಡೆದಿದೆ. ಈ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದರೆ ಇದು ಮತಾಂತರ ಅಲ್ಲ ರೂಪಾಂತರ ಎಂದು ಪಾದ್ರಿ ಸಮರ್ಥನೆ ಮಾಡಿಕೊಂಡಿದ್ದಾರೆ. ಗೌರ್ನಮೆಂಟೇ ಹೇಳಿದೆ ಎಂದು ಸುಳ್ಳು ಹೇಳಿದ್ದಾರೆ. ದಾಖಲೆ ತೋರಿಸಿ ಅಂದ್ರೇ ನೀನ್ ಯಾವಾನೋ ಕೇಳೋಕೆ ಅಂತಾ ಅವಾಜ್ ಬೇರೆ ಹಾಕಿದ್ದಾರೆ. ಇಂದು ವರದಿ ಪ್ರಸಾರವಾದ ಬೆನ್ನಲ್ಲೇ ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: 2023ರ ವಿಧಾನಸಭಾ ಚುನಾವಣೆ, ಸಂಕ್ರಾಂತಿಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ಹೆಚ್‍ಡಿಕೆ

ಭಾನುವಾರ ಬೆಂಗಳೂರಿನ ಬ್ಯಾಡರಹಳ್ಳಿಯ ಕಟ್ಟಡವೊಂದರಲ್ಲಿ ಪ್ರಾರ್ಥನೆ ನೆಪದಲ್ಲಿ ಕೊಳಗೇರಿಯ ಮಂದಿಯನ್ನು ಕರೆಸಿ ಮತಾಂತರಕ್ಕೆ ಪ್ರಚೋದನೆ ನೀಡಿರುವುದನ್ನು ಸ್ಥಳೀಯರೇ ಪತ್ತೆ ಹಚ್ಚಿದ್ದಾರೆ. ಹಣ ನೀಡುವ, ಸೈಟ್ ನೀಡುವ ಆಮಿಷ ಒಡ್ಡಿ ಮತಾಂತರ ಒಡ್ಡಲಾಗುತ್ತಿದೆ ಎಂಬ ಸತ್ಯವನ್ನು ಮಕ್ಕಳೇ ಬಾಯ್ಬಿಟ್ಟಿವೆ. ಮೂರು ದಿನಗಳ ಹಿಂದೆ ಮಂಗಳೂರು ಹೊರವಲಯದ ಸೋಮೇಶ್ವರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸುಮಾರು 15 ಮನೆಗಳ ಮುಂದೆ ಮತಾಂತರಕ್ಕೆ ಪ್ರಚೋದನೆ ನೀಡುವ ಕರಪತ್ರಗಳನ್ನು ಹಾಕಿ ಹೋಗಿದ್ದಾನೆ. ಕ್ರೈಸ್ತ ಧರ್ಮದ ಕುರಿತಾಗಿ ಕನ್ನಡ ಹಾಗೂ ಮಲಯಾಳಂ ಭಾಷೆಯ ಕರಪತ್ರಗಳು. ಪುಸ್ತಕಗಳು ಪತ್ತೆ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.

ಸೆಪ್ಟೆಂಬರ್ 22ರಂದು ಪಾರ್ಕ್‍ನಲ್ಲಿ ವಿದ್ಯಾರ್ಥಿಗಳಿಗೆ ಮತಾಂತರ ಆಮಿಷ ಒಡ್ಡುತ್ತಿದ್ದ ಆರೋಪದ ಮೇಲೆ ತಾಯಿ ಮಗನನ್ನು ಹಿಂದೂ ಸಂಘಟನೆಗಳ ನೆರವಿನಿಂದ ಹಾಸನದಲ್ಲಿ ಬಂಧಿಸಲಾಗಿದೆ. ಶಿವಮೊಗ್ಗದ ತಾಳಗುಪ್ಪದಲ್ಲೂ ಮತಾಂತರ ಯತ್ನದ ಆರೋಪದ ಮೇಲೆ ದಂಪತಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *