ಕರ್ನಾಟಕ ಬಂದ್‍ಗೆ ಯಾರ ಬೆಂಬಲ ಇದೆ, ಯಾರ ಬೆಂಬಲ ಇಲ್ಲ- ಇಲ್ಲಿದೆ ಸಂಪೂರ್ಣ ಮಾಹಿತಿ

Public TV
2 Min Read

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ, ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿರುವ ಬಂದ್ ರಾಜಕೀಯ ತಿರುವು ಪಡೆದುಕೊಂಡಿದೆ. ಬಂದ್‍ಗೆ ಕೆಲವು ಸಂಘಟನೆಗಳು ಬೆಂಬಲ ನೀಡಿದ್ರೆ, ಮತ್ತೆ ಕೆಲವರು ಬಂದ್‍ಗೆ ಬೆಂಬಲ ಘೋಷಿಸಿಲ್ಲ.

ಕಾಂಗ್ರೆಸ್ ಪ್ರಾಯೋಜಿತ ಬಂದ್ ಅಂತ ಬಿಜೆಪಿ ಆರೋಪ ಮಾಡುತ್ತಿದೆ. ಆದ್ರೆ ಇದಕ್ಕೆ ಸೊಪ್ಪು ಹಾಕದ ವಾಟಾಳ್ ನಾಗರಾಜ್, ಬಿಜೆಪಿ ಹೇಳಿದಕ್ಕೆಲ್ಲ ತಲೆಕೆಡಿಸಿಕೊಡಲ್ಲ ಬಂದ್ ನಡೆಸೇ ನಡೆಸುತ್ತೇನೆ ಅಂತಾ ಹೇಳಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಬಂದ್‍ಗೆ ಬೆಂಬಲ ಸೂಚಿಸಿಲ್ಲ. ಕರವೇ ಮತ್ತೊಂದು ಬಣದ ಪ್ರವೀಣ್ ಶೆಟ್ಟಿ ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್‍ಗೆ ಬೆಂಬಲ ನೀಡಲ್ಲ ಮತ್ತು ಬಂದ್ ಪದೇ ಪದೇ ನಡೆಸೋದು ಸರಿಯಲ್ಲ. ನಾವು ವಾಟಾಳ್ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಅಷ್ಟೇ ಅಂತ ಹೇಳಿದ್ದಾರೆ.

ಬಂದ್‍ಗೆ ಯಾರ ಬೆಂಬಲ ಇದೆ?
ಸದ್ಯದ ಮಟ್ಟಿಗೆ ಕನ್ನಡ ಚಿತ್ರೋದ್ಯಮ ಬೆಂಬಲ ಕೊಟ್ಟಿದ್ದು, ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನ ರದ್ದಾಗಲಿದೆ. ಕೆಲ ಆಟೋ ಸಂಘಟನೆ, ಎಪಿಎಂಸಿ ನೌಕರರ ಸಂಘ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ ಕೊಟ್ಟಿದೆ. ಸರ್ಕಾರ ಬಂದ್‍ಗೆ ಬೆಂಬಲ ನೀಡೋದ್ರಿಂದ ಸಾರಿಗೆ ಸಂಸ್ಥೆಯೂ ಬೆಂಬಲ ನೀಡುವ ಸಾಧ್ಯತೆಗಳಿವೆ. ಮಕ್ಕಳ ಹಿತದೃಷ್ಟಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಬಂದ್ ಗೆ ಕನ್ನಡ ಚಿತ್ರೋದ್ಯಮದ ಸಂಪೂರ್ಣ ಸಹಕಾರ ಇರುತ್ತೆ. ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಗೆ ವರೆಗೆ ಬಂದ್ ಮಾಡಲಿದ್ದೇವೆ. ಆದರೆ ಈ ಬಂದ್ ನಲ್ಲಿ ಚಲನಚಿತ್ರ ಕಲಾವಿದರು ಪಾಲ್ಗೊಳ್ಳುವುದಿಲ್ಲ. ಆದರೆ ಸಹಕರಿಸಿ ಬೆಂಬಲ ನೀಡುತ್ತಿದ್ದೇವೆ. ಸಂಜೆ ವೇಳೆಗೆ ಕರ್ನಾಟಕ ಬಂದ್ ಯಶಸ್ವಿಯಾಗೋದರ ಬಗ್ಗೆ ಸ್ಪಷ್ಟ ಚಿತ್ರಣ ಸಾಧ್ಯತೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ತಿಳಿಸಿದ್ದಾರೆ.

ಯಾರು ಬೆಂಬಲ ಘೋಷಿಸಿಲ್ಲ?
ಟ್ಯಾಕ್ಸಿ ಮಾಲೀಕರ ಸಂಘ, ಹೊಟೇಲ್ ಮಾಲೀಕರ ಸಂಘ, ಕೆಲ ಆಟೋ ಸಂಘಟನೆ, ವರ್ತಕರು ಇನ್ನೂ ಕೂಡ ಬೆಂಬಲ ಘೋಷಿಸಿಲ್ಲ. ಮೆಟ್ರೋ ಸಂಚಾರದಲ್ಲೂ ಯಾವುದೇ ವ್ಯತ್ಯಯ ಇಲ್ಲ. ಮೆಟ್ರೋ ರೈಲು ಎಂದಿನಂತೆ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಓಡಲಿದೆ ಎಂದು ಮೆಟ್ರೋ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಓಲಾ ಮತ್ತು ಊಬರ್ ಎಂದಿನಂತೆ ಸಂಚಾರ ನಡೆಸಲಿವೆ.

ನಾಳೆ ನಡೆಯೋ ಬಂದ್ ಗೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳಿಂದ ಬೆಂಬಲ ನೀಡುತ್ತಿಲ್ಲ. ಎಂದಿನಂತೆ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಲಿವೆ. ಕೆಎಸ್‍ಆರ್‍ಟಿಸಿ ಆನ್‍ಲೈನ್ ಬುಕಿಂಗ್ ಗೆ ಯಾವುದೇ ಸಮಸ್ಯೆಯಿಲ್ಲ. ಎಲ್ಲಾ ಬಸ್ ಗಳು ಸಂಚಾರ ನಡೆಸಲಿವೆ ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ದೊರೆಕಿದೆ.

Share This Article
Leave a Comment

Leave a Reply

Your email address will not be published. Required fields are marked *