ಭಾರತ್ ಬಂದ್ ದಿನ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?

Public TV
3 Min Read

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ಮತ್ತೆ ರೈತರು ರಣಕಹಳೆ ಮೊಳಗಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದೆ. ಭಾರತ್ ಬಂದ್ ದಿನ ಕರ್ನಾಟಕ ಬಂದ್ ಗೆ ರೈತರು ಕರೆಕೊಟ್ಟಿದ್ದಾರೆ.

ಹೌದು. ಸೋಮವಾರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಗಳು ಭಾರತ್ ಬಂದ್ ಗೆ ಕರೆಕೊಟ್ಟಿದ್ದು ರಾಜ್ಯದಲ್ಲಿ ಕರ್ನಾಟಕ ಬಂದ್ ಮಾಡೋದಾಗಿ ರೈತ ಸಂಘಟನೆಗಳು ಹೇಳಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯದಲ್ಲಿ ಬಂದ್ ನಡೆಸುತ್ತೇವೆ ಎಲ್ಲರ ಬೆಂಬಲ ಕೋರುತ್ತೇವೆ. ಈಗಾಗಲೇ ದಲಿತ ಸಂಘ, ಕಾರ್ಮಿಕ ಸಂಘ ಕೆಲ ಆಟೋ ಸಂಘ ಕನ್ನಡ ಸಂಘಗಳು ಬೆಂಬಲ ಕೊಟ್ಟಿದೆ ಅಂದ್ರು.

ರೈತ ಸಂಘದ ಪ್ಲಾನ್ ಏನು..?
ಬೆಂಗಳೂರಿನ ಪ್ರಮುಖ ಹೆದ್ದಾರಿ ಸೇರಿದಂತೆ ರಾಜ್ಯದ್ಯಾಂತ ಹೆದ್ದಾರಿ ತಡೆ. ಬೆಂಗಳೂರಿನಲ್ಲಿ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ‍್ಯಾಲಿ. ಒಟ್ಟು 700ಕ್ಕೂ ಹೆಚ್ಚು ಕ್ಯಾಂಟರ್ ವಾಹನದಲ್ಲಿ ನಗರದಲ್ಲಿ ರ‍್ಯಾಲಿ ನಡೆಸಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಬೀಜ ಬಿತ್ತಲಾಗಿದೆ: ಪ್ರಧಾನಿ ಮೋದಿ

ಕುರುಬೂರು ಶಾಂತಕುಮಾರ್ ಬಣ ಬಂದ್ ದಿನ ಯಾವ ಮಾದರಿಯ ಹೋರಾಟ ನಡೆಸಬೇಕು ಎನ್ನುವ ಬಗ್ಗೆ ಇಂದು ಸಭೆ ನಡೆಸಿ ರೂಪುರೇಷೆ ಹಾಕೋದಾಗಿ ಹೇಳಿದ್ರು. ಕೊರೊನಾ ಕಾರಣದಿಂದ ರೈತರ ಪ್ರತಿಭಟನೆಗೆ ಸಂಘಟನೆಗಳಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ. ಹೀಗಾಗಿ ಬಂದ್ ಗೆ ಬಹುತೇಕ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ.

ಎಪಿಎಂಸಿ ತರಕಾರಿ ಮಾರುಕಟ್ಟೆ ವರ್ತಕರ ಸಂಘ ಬಂದ್ ಗೆ ಬೆಂಬಲ ಕೊಟ್ಟಿದೆ. ಹೀಗಾಗಿ ಕಲಾಸಿಪಾಳ್ಯ, ಯಶವಂತ ಪುರ, ದಾಸನಪುರ ಮಾರ್ಕೆಟ್ ಬಂದ್ ಆಗುವ ಸಾಧ್ಯತೆ ಇದೆ. ಕೆಲವು ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಬಂದ್ ಗೆ ಬೆಂಬಲ ಕೊಟ್ಟಿದ್ದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಕಿಸಾನ್ ಘಟಕದಿಂದ ಬೆಂಬಲ ಪ್ರತಿಭಟನೆ ಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟದಿಂದಲೂ ಬೆಂಬಲ ಸಿಕ್ಕಿದೆ.

ಆಟೋ, ಊಬರ್, ಓಲಾ ಸಂಘಟನೆಗಳಿಂದ ನೈತಿಕ ಬೆಂಬಲ ನೀಡಿವೆ. ಕೊರೊನಾ ಕಾರಣದಿಂದ ಬಂದ್ ದಿನ ವಾಹನ ಸ್ಥಗಿತಗೊಳಿಸಲ್ಲ. ಎಂದಿನಂತೆ ಸಂಚಾರ ವ್ಯವಸ್ಥೆ ಇರಲಿದೆ. ಸಾರಿಗೆ ಯೂನಿಯನ್ ಗಳು ಬಂದ್ ಗೆ ಬೆಂಬಲ ಕೊಟ್ಟಿಲ್ಲ. ರೈತರ ಪ್ರತಿಭಟನೆಗೆ ಸಾರಿಗೆ ನೌಕರರು ಪಾಲ್ಗೊಳ್ಳಲ್ಲ. ಬಸ್ ಸಂಚಾರ ಯಥಾ ಸ್ಥಿತಿ ಇರುತ್ತೆ. ಈ ಹಿನ್ನೆಲೆಯಲ್ಲಿ ದೂರದ ಊರುಗಳಿಗೂ ಬಸ್ ಸೇವೆ ಲಭ್ಯವಿರಲಿವೆ.

ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಹೋಟೆಲ್ ಗಳ ಬೆಂಬಲ ಇಲ್ಲ. ಯಾಕೆಂದರೆ ಕೊರೊನಾ ಕಾರಣದಿಂದ ಈಗಾಗಲೇ ನಷ್ಟದ ಹೊಡೆತ ತಿಂದಿದ್ದೇವೆ. ಹೀಗಾಗಿ ಯಾವ ಬಂದ್ ಗೂ ಬೆಂಬಲ ಕೊಡಲ್ಲ ಅನ್ನೋದು ಹೋಟೆಲ್ ಮಾಲೀಕರ ಸಂಘದ ಅಭಿಪ್ರಾಯವಾಗಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಕೇವಲ ನೈತಿಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಶಾಲಾ- ಕಾಲೇಜು ಎಂದಿನಂತೆ ತೆರೆಯಲಿದೆ. ಮಾಲ್ ಅಸೋಸಿಯೇಷನ್ ನವರು ಇಂದು ಅಂತಿಮ ತೀರ್ಮಾನ ಹೇಳೋದಾಗಿ ಹೇಳಿದ್ದಾರೆ. ಆದರೆ ಬಹುತೇಕ ಬೆಂಬಲ ಕೊಡದೇ ಇರಲು ತೀರ್ಮಾನ ಮಾಡಿದ್ದಾರೆ. ತುಂಬಾ ಕಾಲ ಬಂದ್ ಆಗಿದ್ದ ಮಾಲ್ ನಷ್ಟದ ಕಾರಣವೊಡ್ಡಿ ಬಂದ್ ದಿನ ಒಪನ್ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೀದಿ ಬದಿ ವ್ಯಾಪಾರ ಕೂಡ ಎಂದಿನಂತೆ ನಡೆಯಲಿದೆ. ಇತ್ತ ಕನ್ನಡ ಸಂಘಟನೆಗಳು ಇನ್ನು ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಪ್ರತಿಭಟನೆ ಗೆ ಬೆಂಬಲದ ಬಗ್ಗೆ ಕರವೇ ನಾರಾಯಣ ಗೌಡ ಹಾಗೂ ಪ್ರವೀಣ್ ಶೆಟ್ಟಿ ಬಣ ಇನ್ನು ತಮ್ಮ ಅಂತಿಮ ನಿರ್ಧಾರ ತಿಳಿಸಿಲ್ಲ. ಒಟ್ಟಾರೆ ಕೊರೋನಾ ಸಂದರ್ಭದಲ್ಲಿ ಬಂದ್ ಎಷ್ಟರಮಟ್ಟಿಗೆ ಸಫಲವಾಗುತ್ತೆ ಅನ್ನೋದನ್ನು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *