ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

Public TV
2 Min Read

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ರಾಗಿ, ರಾಗಿ ಎಂದು ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಘೋಷಣೆ ಕೂಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶಕ್ಕೆ ಗುರಿಯಾದರು.

ಶೂನ್ಯವೇಳೆಗೂ ಮುಂಚೆ ಎದ್ದು ನಿಂತ ಡಾ. ರಂಗನಾಥ್ ರಾಗಿ ಖರೀದಿ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದ್ರು. ಅಷ್ಟೇ ಅಲ್ಲ ರಾಗಿ, ರಾಗಿ ಎಂದು ಘೋಷಣೆ ಕೂಗಿದರು. ಆಗ ರಂಗನಾಥ್ ವರ್ತನೆಗೆ ಸ್ಪೀಕರ್ ಕಾಗೇರಿ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಅಸಭ್ಯವಾಗಿ ನಡೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

ರಾಗಿ ವಿಚಾರ ಪ್ರಮುಖವಾದದ್ದು ಎಂದು ಗೊತ್ತಿದೆ. ಅಸಭ್ಯವಾಗಿ ಅಸಹ್ಯವಾಗಿ ವರ್ತನೆ ಮಾಡಬೇಡಿ. ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು. ಮೂರು ಲಕ್ಷ ಟನ್ ಹೆಚ್ಚುವರಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವಣೆ ಸಲ್ಲಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಉತ್ತರ ಬೇಕೆಂದರೆ ನಿಯಮಾವಳಿ ಪ್ರಕಾರ ನಡೆದುಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು. ಬಳಿಕ ರಂಗನಾಥ್ ಸುಮ್ಮನಾದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

ಇನ್ನೊಂದೆಡೆ ಶೂನ್ಯವೇಳೆಯಲ್ಲಿ ಬೀದರ್, ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ರಾಶಿಯಂತ್ರಕ್ಕೆ ಸಿಲುಕಿ ಸರಣಿ ಸಾವುಗಳಾಗುತ್ತಿವೆ ಎಂದು ಶಾಸಕ ಈಶ್ವರ್ ಖಂಡ್ರೆ ಪ್ರಸ್ತಾಪಿಸಿದರು. ಕಲಬುರಗಿ ಜಿಲ್ಲೆಯಲ್ಲಿ 18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ. ರಾಶಿ ಯಂತ್ರ ಅಂದ್ರೆ, ಕಡಲೆ, ತೊಗರಿ ಕಟವ್ ಮಾಡುವ ಯಂತ್ರವನ್ನು ರೈತರು ಖರೀದಿ ಮಾಡ್ತಾರೆ ಆದ್ರೆ ರೈತರಿಗೆ ಈ ಯಂತ್ರ ಉಪಯೋಗ ಮಾಡಲು ಬರಲ್ಲ. ಕೆಲದಿನಗಳ ಹಿಂದೆ ಮಹಿಳೆಯ ಕೂದಲು ಹಾಗೂ ಚೂಡಿದಾರದ ದುಪ್ಪಟ ಸಿಲುಕಿ ಸಾವಿಗೀಡಾಗಿದ್ದಾರೆ. ಈ ಯಂತ್ರ ಉಪಯೋಗಕ್ಕೆ ಯಾವುದೇ ರೀತಿಯ ತರಬೇತಿ, ಜಾಗೃತಿ ಇಲ್ಲ. ಇದಕ್ಕೆ ತರಬೇತಿ ಕೊಡಬೇಕು. ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡುವಂತೆ ಈಶ್ವರ ಖಂಡ್ರೆ ಮನವಿ ಮಾಡಿಕೊಂಡರು.

ಈ ವೇಳೆ ಸ್ಪೀಕರ್ ಮಧ್ಯಪ್ರವೇಶ ಮಾಡಿ ಯಂತ್ರಗಳನ್ನು ನೋಡಿದ್ರೆ ಎಲ್ಲ ತಮಿಳುನಾಡಿನಿಂದ ಬರ್ತಿವೆ ಅನ್ಸುತ್ತೆ? ಎಲ್ಲ ತಮಿಳುನಾಡಿನವು ಅಲ್ವಾ ಎಂದು ಪ್ರಶ್ನಿಸಿದ್ರು. ಬಳಿಕ ಉತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತರಿಗೆ ತರಬೇತಿ ಕೊಡುವ ಕೆಲಸವನ್ನು ಕೃಷಿ ಇಲಾಖೆಯಿಂದಲೇ ಮಾಡುತ್ತೇವೆ. ಸಾವಿಗೀಡಾದವರಿಗೆ ಪರಿಹಾರ ನೀಡುವ ಬಗ್ಗೆ ಅವಕಾಶ ಇದ್ದರೆ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *