ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಸರ್ಕಸ್ – ಇನ್‍ಸೈಡ್ ಸ್ಟೋರಿ ಇಲ್ಲಿದೆ

Public TV
2 Min Read

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಉಂಟಾಗಿರುವಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುನ್ನವೇ ಕಾಂಗ್ರೆಸ್‍ನಲ್ಲೂ ಭಿನ್ನಮತದ ಆತಂಕ ಕಾಡುತ್ತಿದೆ ಎಂಬ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ದೆಹಲಿಯಲ್ಲಿ ಬೆವರು ಹರಿಸುತ್ತಿದೆ. ಮಿಸ್ತ್ರಿ ಸಮಿತಿ ನೀಡಿದ ವರದಿ ರಾಹುಲ್ ಗಾಂಧಿ ತಲುಪಿದ್ದು, ಪಟ್ಟಿಯನ್ನು ಅಂತಿಮ ಗೊಳಿಸಲು ಮತ್ತೊಂದು ಸುತ್ತಿನ ಸರ್ಕಸ್ ನಡೆಯುತ್ತಿದೆ.

ಕಾಂಗ್ರೆಸ್ ಮೊದಲ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಕುರಿತು ಪಬ್ಲಿಕ್ ಟಿವಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸ್ಕ್ರೀನಿಂಗ್ ಕಮಿಟಿ ಫೈನಲ್ ಪಟ್ಟಿಯಲ್ಲಿ ಹಲವು ಗೊಂದಲಕ್ಕಿಡಾಗಿದೆ ಎನ್ನಲಾಗಿದೆ. ಪಟ್ಟಿ ಅಂತಿಮಗೊಳಿಸವ ಕಾರ್ಯಕ್ಕೆ ರಾಹುಲ್‍ಗಾಂಧಿ ಸಹಾಯಕ್ಕೆ ಸೋನಿಯಾ ಗಾಂಧಿ ಆಗಮಿಸಿದ್ದಾರೆ. ಹೀಗಾಗಿ ಇಂದು ಬೆಳಗ್ಗೆ ಮತ್ತು ಸಂಜೆ ರಾಹುಲ್ ಹಾಗೂ ಸೋನಿಯಾ ನಿವಾಸದಲ್ಲಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಬಿಡುವಿಲ್ಲದಂತೆ ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಅಂತಿಮ ಪಟ್ಟಿ ಯಾವುದೇ ಕ್ಷಣದಲ್ಲಿ ಬೇಕಾದರೂ ಪ್ರಕಟವಾಗುವ ಸಾಧ್ಯತೆ ಇದೆ. ಇನ್ನು ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುವುದು ಖಚಿತವಾಗಿದ್ದು, ಏಪ್ರಿಲ್ 20ಕ್ಕೆ ಚಾಮುಂಡೇಶ್ವರಿ, 23ಕ್ಕೆ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 190 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ 34 ಕ್ಷೇತ್ರಗಳಲ್ಲಿ ಹೆಚ್ಚಿನ ಗೊಂದಲ ಉಂಟಾಗಿದೆ. ಹೂವಿನಹಡಗಲಿ, ಬಾಗಲಕೋಟೆ, ಬೀದರ್ ದಕ್ಷಿಣ, ಪುಲಕೇಶಿನಗರ ಕ್ಷೇತ್ರಗಳು ಕಾಂಗ್ರೆಸ್ ನಾಯಕರ ತಲೆ ನೋವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಶೋಕ್ ಖೇಣಿ, ಅಖಂಡ ಶ್ರೀನಿವಾಸ್ ಮೂರ್ತಿ, ಮಾಯಕೊಂಡದ ಶಿವಮೂರ್ತಿ ನಾಯಕ್‍ಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.

ಸಭೆಯಲ್ಲಿ ಹಿರಿಯರ ವಿರೋಧ ಇದ್ದರೂ ಹಗರಿಬೊಮ್ಮನಹಳ್ಳಿಯ ಭೀಮಾನಾಯಕ್ ಟಿಕೆಟ್‍ಗೆ ಸಿದ್ದರಾಮಯ್ಯ ಬಿಗಿ ಪಟ್ಟು ಹಿಡಿದಿದ್ದು, ಶಿವಮೂರ್ತಿ ನಾಯಕ್ ಬದಲಿಗೆ ಖರ್ಗೆ ಬೆಂಬಲಿಗ ಕೆ.ಎಸ್. ಬಸವರಾಜ್ ಹೆಸರು ಪ್ರಸ್ತಾಪಿಸಲಾಗಿದೆಯಂತೆ. ವರುಣಾದಲ್ಲಿ ಯತೀಂದ್ರ, ಕೆಜಿಎಫ್‍ನಲ್ಲಿ ಮುನಿಯಪ್ಪ ಪುತ್ರಿ ರೂಪಾ, ಜಯನಗರದಲ್ಲಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಟಿಕೆಟ್ ಖಚಿತವಾಗಿದೆ ಎಂದು ಮೂಲಗಳು ತಿಳಿಸಿದೆ.

ಕಾಂಗ್ರೆಸ್ ಹಿರಿಯರಿಂದ ಹಾಲಿ ಮುಂಖಡ ಮಕ್ಕಳಿಗೆ ಟಿಕೆಟ್ ನೀಡಲು ತೀವ್ರ ವಿರೋಧ ವ್ಯಕ್ತವಾಗಿದ್ದು, ಆದ್ರು ತೀವ್ರ ವಿರೋಧದ ನಡುವೆಯೂ ಈ ಮೂವರಿಗೂ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಪಟ್ಟಿಯಲ್ಲಿ ಗೆಲುವಿನ ಮಾನದಂಡವೇ ಇವರ ಆಯ್ಕೆಗೆ ಕಾರಣ ಎಂದು ಸಮರ್ಥನೆ ನೀಡಲಾಗಿದೆ. ಇದರೊಂದಿಗೆ ಸೋನಿಯಾ ಅವರ ಮುಂದೆ 13 ದಲಿತ ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಸಿದ್ದರಾಮಯ್ಯ ಅವರು ನೀಡಿದ್ದಾರೆ ಎನ್ನಲಾಗಿದ್ದು, ಈ ಪಟ್ಟಿಯಲ್ಲಿ ಸಿವಿ ರಾಮನ್ ನಗರ ದಿಂದ ಕೆವಿ ಗೌತಮ್, ರಾಯಭಾಗ ದಿಂದ ಸುಕುಮಾರ್ ಪಿ ಕಿರಣಗಿ, ಮುಧೋಳ ದಿಂದ ಆರ್‍ಬಿ ತಿಮ್ಮಾಪುರ, ಹೊಳಲ್ಕೆರೆ ಕ್ಷೇತ್ರದಿಂದ ಆಂಜನೇಯ ಹಾಗೂ ನೆಲಮಂಗಲ ಕ್ಷೇತ್ರದಿಂದ ಅಂಜನಮೂರ್ತಿ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.

https://www.youtube.com/watch?v=12vBiSfo2Rk

Share This Article
Leave a Comment

Leave a Reply

Your email address will not be published. Required fields are marked *