5 ಕೋಟಿ ದಾಟಿದ ಮತದಾರರ ಸಂಖ್ಯೆ, 2924 ನಾಮಪತ್ರ ಸಲ್ಲಿಕೆ: ನಗದು ಸಿಕ್ಕಿದ್ದು ಎಷ್ಟು? ಕೇಸ್ ಎಷ್ಟು ಬಿದ್ದಿದೆ?

Public TV
2 Min Read

ಬೆಂಗಳೂರು: ರಾಜ್ಯದ ಮತದಾರರ ಸಂಖ್ಯೆ 5 ಕೋಟಿ ದಾಟಿದೆ. ಈ ಚುನಾವಣೆಗೆ 5,10,39,107 ಮಂದಿ ಮತದಾರರಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದ ಅವಧಿ ಮುಕ್ತಾಯಗೊಂಡಿದೆ. ಇದೂವರೆಗೂ ಮಂಗಳವಾರ ಸಂಜೆ 6:30ರ ವೇಳೆಗೆ 2,924 ನಾಮಪತ್ರಗಳು ಸಲ್ಲಿಕೆಯಾಗಿದ್ದು 16 ವಿಧಾನಸಭಾ ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯರಾತ್ರಿ ನಂತರ ಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಈವರೆಗೂ 19.62 ಕೋಟಿ ರೂ. ಮೌಲ್ಯದ 4,09,099 ಲೀಟರ್ ಮದ್ಯವನ್ನು ವಶ ಪಡಿಸಿದ್ದು, 20.88 ಕೋಟಿ ರೂ. ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 31,476 ಜಾಮೀನು ರಹಿತ ಪ್ರಕರಣ ದಾಖಲಾಗಿದ್ದು, 72,435 ಗೂಂಡಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಪಕ್ಷದ ಕಾರ್ಯಕ್ರಮಗಳಲ್ಲಿ ಊಟೋಪಚಾರ ನಡೆಸುವ ವಿಚಾರದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಪಕ್ಷಕ್ಕೆ ದುಡಿಯುವವರಿಗೆ ಊಟ ಮಾಡಿಸಬಹುದು. ಆದರೆ ಬೇರೆಯವರಿಗೆ ಊಟ ನೀಡಿದರೆ ಅದು ಆಮಿಷ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಚುನಾವಣಾ ಆಯೋಗ ಯಾವುದೇ ಬಾರ್ ಲೈಸೆನ್ಸ್ ರದ್ದು ಮಾಡಿಲ್ಲ. ಆದರೆ ಆದರೆ ನೀತಿ ಸಂಹಿತೆ ಉಲ್ಲಂಘಿಸುವ ಬಾರ್ ಗಳ ಮೇಲೆ ಅಬಕಾರಿ ಆಯುಕ್ತರು ಕ್ರಮ ಜರುಗಿಸುತ್ತಾರೆ. ಬೆಂಗಳೂರು ನಗರದಲ್ಲಿ ರಾಜಕೀಯ ಪಕ್ಷಗಳ ಹೋಲ್ಡಿಂಗ್ ಗಳಿಗೆ ಅನುಮತಿ ನೀಡಲು ಚುನಾವಣಾ ಆಯೋಗ ಮಾರ್ಗಸೂಚಿ ರಚಿಸಿದೆ. ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಆಯೋಗದ ಆನ್ ಲೈನ್ ದೂರು ಸ್ವೀಕಾರ ವ್ಯವಸ್ಥೆ `ಸುವಿಧಾ’ದಲ್ಲಿ ಸ್ವೀಕಾರವಾದ ದೂರುಗಳಿಗೆ 24 ತಾಸುಗಳಲ್ಲಿ ಪರಿಹಾರ ಸೂಚಿಸಲಾಗುತ್ತದೆ. ಅಗ್ನಿಶಾಮಕ ದಳದಿಂದ ಪೂರ್ವಾನುಮತಿ ಪಡೆದಿರುವ ಕಡೆಗಳಲ್ಲಿ ಹೆಲಿಕಾಪ್ಟರ್ ಬಳಕೆಗೆ ಒಂದು ಗಂಟೆಯಲ್ಲಿ ಅನುಮತಿ ನೀಡಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಈ ವೇಳೆ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲ ಬಾರಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಅದಕ್ಕೆ ಆಯೋಗ ಆಕ್ಷೇಪ ವ್ಯಕ್ತಪಡಿಸಿತ್ತು. ಎರಡನೇ ಬಾರಿ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಯೋಗದ ಪಾತ್ರವಿಲ್ಲ. ಡಿಪಿಎಆರ್ ಕಾನೂನಿನಂತೆ ಸರ್ಕಾರ ವರ್ಗಾವಣೆ ನಡೆಸಿದೆ ಎಂದು ಅವರು ಹೇಳಿದರು.

ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು 2054
ಒಟ್ಟು ಪುರುಷ ಅಭ್ಯರ್ಥಿಗಳು – 1920
ಒಟ್ಟು ಮಹಿಳಾ ಅಭ್ಯರ್ಥಿಗಳು – 134
ಒಟ್ಟು ಪಕ್ಷೇತರ ಅಭ್ಯರ್ಥಿಗಳು – 885
ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳು – 15
ಬಿಜೆಪಿ ಮಹಿಳಾ ಅಭ್ಯರ್ಥಿಗಳು – 13
ಜೆಡಿಎಸ್ ಮಹಿಳಾ ಅಭ್ಯರ್ಥಿಗಳು – 11
ಎಂಇಪಿ ಮಹಿಳಾ ಅಭ್ಯರ್ಥಿಗಳು – 12

Share This Article
Leave a Comment

Leave a Reply

Your email address will not be published. Required fields are marked *