ದೇವಸ್ಥಾನಕ್ಕೆ ಬಂದ್ರು, ಸಭಾಂಗಣಕ್ಕೆ ಬರಲಿಲ್ಲ- ಕರಾವಳಿಯ ಬಿಲ್ಲವರಿಂದ ಸಿಎಂ ವಿರುದ್ಧ ಆಕ್ರೋಶ

Public TV
3 Min Read

ಉಡುಪಿ: ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಅಂತ ರಾಜ್ಯದಲ್ಲಿ ಬಿಂಬಿತವಾಗುತ್ತಿದೆ ಎನ್ನಲಾಗುತ್ತಿದೆ. ವಿಪಕ್ಷದ ಜೊತೆ ಜನರೂ ಹೀಗೆ ಆರೋಪ ಮಾಡ್ತಾಯಿದ್ದಾರೆ. ಹೀಗೆ ಮುಂದುವರೆದರೆ ಮುಂದಿನ ಚುನಾವಣೆ ಗೆಲ್ಲೋದು ಕಷ್ಟ ಅಂತ ಸಿಎಂ ಕರಾವಳಿಯಲ್ಲಿ ಟೆಂಪಲ್ ರನ್ ಮಾಡಿದ್ರು. ಗಂಟೆಯೊಳಗೆ ಎರಡು ದೇವಸ್ಥಾನಕ್ಕೆ ಹೋದ್ರು. ಇಷ್ಟೆಲ್ಲಾ ಮಾಡಿದ್ರೂ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯವನ್ನು ಸಿಎಂ ಎದುರು ಹಾಕಿಕೊಂಡಂತಾಗಿದೆ.

ಸಿಎಂ ಸಿದ್ದರಾಮಯ್ಯ ಕಾಲಿಗೆ ಚಕ್ರ ಕಟ್ಟಿಕೊಂಡು ದಿನಕ್ಕೆ ಮೂರು ಸಮಾವೇಶ ಮಾಡುತ್ತಿದ್ದಾರೆ. ಹೆಲಿಕಾಪ್ಟರ್ ಹತ್ತಿ, ಹಾರಿ ಇಡೀ ರಾಜ್ಯ ಸುತ್ತುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಂತ ಬಿಜೆಪಿ ಬಿಂಬಿಸುವುದರಲ್ಲಿ ಯಶಸ್ವಿಯಾಗುತ್ತಿದೆ. ಅದ್ರಲ್ಲೂ ಕರಾವಳಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಕೂಡಾ ಸಮೀಕ್ಷೆಗಳಲ್ಲಿ ಬಂದಿದೆ. ಈ ನಡುವೆ ಸಿಎಂ ಈ ಆರೋಪದಿಂದ ಮುಕ್ತರಾಗಲು ಉಡುಪಿಯಲ್ಲಿ ಎರಡು ದೇವಸ್ಥಾನಗಳಿಗೆ ವಾರದ ಹಿಂದೆ ಭೇಟಿ ಕೊಟ್ಟಿದ್ದರು. ತಾನು ದೈವ ಭಕ್ತ ಅಂತ ಪ್ರೂವ್ ಮಾಡಲು ಮುಂದಾಗಿದ್ದರು. ಎಲ್ಲಾ ಕಡೆ ನಾನೂ ಹಿಂದು ಎಂದು ಹೇಳಿಯೇಬಿಟ್ಟರು. ಬೈಂದೂರು, ಬ್ರಹ್ಮಾವರ, ಕಾಪುವಿನಲ್ಲಿ ನಾನು ಹಿಂದೂ ಅನ್ನುತ್ತಾ ಯುಪಿ ಸಿಎಂ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಸಿಎಂ ಕಾಪು ಜನಾರ್ದನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದರು. ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಹೋಗಿ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯ ಆರಾಧಿಸುವ ನಾರಾಯಣ ಗುರುಗಳ ಸನ್ನಿಧಿಯಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ಆರತಿ ಪಡೆದು-ಗುರುಗಳ ಮುಂದೆ ನಿಂತು ಕ್ಷೇತ್ರದ ಬಗ್ಗೆ ಅರಿತುಕೊಂಡರು. ನಂತರ ಸಮುದಾಯ ಭವನದ ಹೊರಭಾಗದಲ್ಲಿ ಕಟ್ಟಡದ ಉದ್ಘಾಟನೆ ಮಾಡಿದರು. ಇಷ್ಟಾಗಿ ಸಿಎಂ ಹೊರಟು ಹೋಗಿದ್ದರು.

ಸಭಾಂಗಣದಲ್ಲಿ ಸಿಎಂ ಬರ್ತಾರೆ ಅಂತ ಒಂದೂವರೆ ಸಾವಿರ ಜನ ಕಾಯ್ತಾಯಿದ್ದರು. ಸಭಾಂಗಣದ ಉದ್ಘಾಟನೆಗೆ ದೀಪಸ್ತಂಭ ಸಿದ್ಧವಾಗಿತ್ತು, ವೇದಿಕೆ ರೆಡಿಯಾಗಿತ್ತು. ಆದ್ರೆ ಸಿಎಂ ಸಭಾಂಗಣಕ್ಕೆ ಬಾರದೆ ವಾಪಾಸ್ ಉಡುಪಿ ಕಾಂಗ್ರೆಸ್ ಕಚೇರಿಗೆ ಹೋದರು. ಸಚಿವ ಪ್ರಮೋದ್ ಮಧ್ವರಾಜ್ ಕೈ ಮುಗಿದು ಸಿಎಂ ಅವರನ್ನು ಕರೆದರು. ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆ ಸಿಎಂ ಅವರನ್ನು ನಿವೇದನೆ ಮಾಡಿಕೊಂಡರು. ಬಿಲ್ಲವ ಸಮಾಜದ ಪ್ರಮುಖರು ಸಿಎಂ ಸಭಾಂಗಣಕ್ಕೆ ಬಂದು ನೋಡುವಂತೆ, ಸಣ್ಣ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದರು. ಆದ್ರೆ ಈ ಯಾವುದೇ ಬೇಡಿಕೆಗಳಿಗೆ ಮಣಿಯದೆ ಸಿಎಂ ಕೈ ಮುಗಿದು ಅಲ್ಲಿಂದ ಹೊರಟುಬಿಟ್ಟರು. ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲೇ ಶಿವಭಕ್ತರಾದ ಸಿಎಂ- ಮಹದೇಶ್ವರನಿಗೆ ಬೆಳ್ಳಿ ಉಡುಗೊರೆಗಳ ಕಾಣಿಕೆ, ತಿರುಪತಿಗಿಂತಲೂ ಅದ್ಭುತವಾದ ಚಿನ್ನದ ರಥ ನಿರ್ಮಿಸಲು ಸೂಚನೆ

ಸಿಎಂ ದೇವಸ್ಥಾನಕ್ಕೆ ಬಂದ್ರು, ಖುಷಿಯಾಗಿದೆ. ಆದ್ರೆ ಗಂಟೆಗಟ್ಟಲೆ 1500 ಜನ ಕಾಯ್ತಾಯಿದ್ದರು. ಮೇಲೆ ಸಭಾಂಗಣಕ್ಕೆ ಬಾರದೆ ಹೋದದ್ದು ತಪ್ಪು. ಬಿಲ್ಲವರನ್ನು ಕಡೆಗಣಿಸಿದ್ರು, ಇದು ಉಡಾಫೆ ಎಂದು ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯ ರವಿ ಕೋಟ್ಯಾನ್ ದೂರಿದ್ದಾರೆ.

ಸಿಎಂಗಾಗಿ ಸಭಾಂಗಣಕ್ಕೆ ಬಾರದೆ ಬಿಲ್ಲವರಿಗೆ ಅವಮಾನ ಮಾಡಿದ್ರು. ಕೇವಲ ಓಟಿಗಾಗಿ ವಿಶ್ವನಾಥ ಕ್ಷೇತ್ರಕ್ಕೆ ಬಂದು ಹೋದರು. ನಾವು ಕಾಯುತ್ತಿದ್ದರೂ ನಮ್ಮನ್ನು ಲೆಕ್ಕಿಸದೆ ಅವಮಾನ ಮಾಡಿದರು. ಇದು ಎರಡು ಜಿಲ್ಲೆಯ ಸಾವಿರಾರು ಬಿಲ್ಲವರಿಗೆ ಮಾಡಿದ ಅವಮಾನ ಅಂತ ಜನ ದೂರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗ್ತಾಯಿದೆ. ವಾಟ್ಸಪ್, ಫೇಸ್‍ಬುಕ್ ನಲ್ಲಿ ಸಿಎಂ ಬಿಲ್ಲವ ವಿರೋಧಿ ಎಂದು ಬಿಂಬಿಸಲಾಗುತ್ತಿದೆ.

ಬಿಲ್ಲವ ಯುವ ನಾಯಕ ಸಂತೋಷ್ ಬೊಳ್ಜೆ ಮಾತನಾಡಿ, ಬೇರೆ ಧರ್ಮದ ಕಾರ್ಯಕ್ರಮಗಳಲ್ಲಿ ಗಂಟೆಗಟ್ಟಲೆ ಭಾಗವಹಿಸುವ ಸಿಎಂ ಹಿಂದೂಗಳ ಬಗ್ಗೆ ತಾತ್ಸಾರ ಹೊಂದಿದ್ದಾರೆ. ಬಿಲ್ಲವರಿಗೆ ಇದರಿಂದ ನೋವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ಎರಡೆರಡು ದೇವಸ್ಥಾನಕ್ಕೆ ಭೇಟಿ ಕೊಡುವುದೇ ವಿಶೇಷ. ಇಷ್ಟು ಮಾಡಿದ್ರೂ ಬಿಜೆಪಿಗರಿಗೆ ಮಾಡೋದಕ್ಕೆ ಬೇರೆ ಕೆಲಸವಿಲ್ಲ. ಎಲ್ಲದರಲ್ಲೂ ಕಾಂಟ್ರವರ್ಸಿ ಮಾಡ್ತಾರೆ ಎಂಬ ಆರೋಪ ಕಾಂಗ್ರೆಸ್ ನಿಂದ ಕೇಳಿಬಂದಿದೆ. ಹೋದ್ರೂ ತಪ್ಪು, ಹೋಗದಿದ್ರೂ ತಪ್ಪು, ಮಾಡಿದ್ರೂ ತಪ್ಪು, ಮಾಡದಿದ್ರೂ ತಪ್ಪು ಅನ್ನೋ ಹಾಗಾಗಿದೆ. ಒಟ್ಟಿನಲ್ಲಿ ಚುನವಾಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಮೇಲಾಟಗಳು ಜೋರಾಗಿದೆ. ಸಿಎಂ ಬಂದು ಹೋದ್ರೂ ಸಾಮಾಜಿಕ ಜಾಲತಾಣಗಳು ವಿಷಯವನ್ನು ಜೀವಂತವಾಗಿಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *