ಕನ್ನಡಿಗನ ಪರ ಬ್ಯಾಟ್ ಬೀಸಿ, ಮ್ಯಾನೇಜ್‍ಮೆಂಟ್ ವಿರುದ್ಧ ಕಿಡಿಕಾರಿದ ಕಪಿಲ್ ದೇವ್

Public TV
2 Min Read

– ‘ರಾಹುಲ್ ತಂಡದಿಂದ ಹೊರಗಿರುವುದರಲ್ಲಿ ಅರ್ಥವೇ ಇಲ್ಲ’

ನವದೆಹಲಿ: ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಸಖತ್ ಮಿಂಚಿದ್ದಾರೆ. ಆದರೆ ಈಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರನ್ನು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‍ನಲ್ಲಿ ನಡೆದ ಮೊದಲ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಬಳಗವು ಸೋಮವಾರ 10 ವಿಕೆಟ್‍ಗಳಿಂದ ಸೋಲು ಕಂಡಿದೆ. ಈ ಪಂದ್ಯದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ಟೀಂ ಇಂಡಿಯಾವನ್ನು ಟೀಕಿಸಿದರು. ಇದನ್ನೂ ಓದಿ: ಕೆ.ಎಲ್.ರಾಹುಲ್ ‘360 ಡಿಗ್ರಿ’ ಬ್ಯಾಟ್ಸ್‌ಮನ್‌: ಮಂಜ್ರೇಕರ್

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, “ನಾವು ನ್ಯೂಜಿಲೆಂಡ್ ತಂಡವನ್ನು ಹೊಗಳಬೇಕು. ಕಿವೀಸ್ ಆಟಗಾರರ ಉತ್ತಮ ಆಟವಾಡಿದ್ದಾರೆ. ಮೂರು ಏಕದಿನ ಪಂದ್ಯಗಳು ಮತ್ತು ಈ ಟೆಸ್ಟ್ ಪಂದ್ಯವು ಅತ್ಯುತ್ತಮವಾಗಿದ್ದವು. ಈ ಪಂದ್ಯವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದರೆ, ಒಬ್ಬ ಆಟಗಾರ ಎಷ್ಟು ಬದಲಾವಣೆಗೆ ಒಳಗಾಗಬಹುದು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಟೀಂ ಇಂಡಿಯಾ ಪ್ರತಿಯೊಂದು ಪಂದ್ಯದಲ್ಲೂ ಹೊಸ ತಂಡವಾಗಿತ್ತು. ತಂಡದಲ್ಲಿ ಯಾರೂ ಶಾಶ್ವತವಲ್ಲ ಎನ್ನುವಂತಿತ್ತು. ಆಟಗಾಗರ ಕ್ರಮಾಂಕ, ಜವಾಬ್ದಾರಿ ಮೇಲೆ ಯಾವುದೇ ಭದ್ರತೆ ಇಲ್ಲದಿದ್ದರೆ ಅದು ಅವರ ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು.

ಬ್ಯಾಟಿಂಗ್ ಕ್ರಮದಲ್ಲಿ ಅನುಭವಿ ಆಟಗಾರರ ದೊಡ್ಡ ಪಟ್ಟಿಯೇ ಇದೆ. ಆದರೂ ನೀವು 2 ಇನ್ನಿಂಗ್ಸ್ ಗಳಲ್ಲಿ ಒಂದು ಬಾರಿಯೂ 200+ ರನ್ ಗಳಿಸಲು ಸಾಧ್ಯವಾಗಲಿಲ್ಲ. ಯೋಜನೆ ಮತ್ತು ಕಾರ್ಯತಂತ್ರದ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ಮ್ಯಾನೇಜ್‍ಮೆಂಟ್ ಹೆಚ್ಚು ಗಮನ ಹರಿಸಬೇಕು ಎಂದು ಕಪಿಲ್ ದೇವ್ ಸಲಹೆ ನೀಡಿದರು. ಇದನ್ನೂ ಓದಿ: ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ. ನಾವು ಆಡುತ್ತಿದ್ದಾಗ ಹಾಗೂ ಈಗ ಏನಾಗುತ್ತಿದೆ ಎಂಬುದರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ತಂಡವನ್ನು ನಿರ್ಮಿಸುವಾಗ ಆಟಗಾರರಿಗೆ ಆತ್ಮವಿಶ್ವಾಸವನ್ನು ನೀಡಬೇಕು. ಮ್ಯಾನೇಜ್‍ಮೆಂಟ್ ನಿರ್ದಿಷ್ಟ ಆಟಗಾರರನ್ನು ನಂಬುತ್ತದೆ. ಕೆ.ಎಲ್.ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೂ ಅವರು ಹೊರಗೆ ಕುಳಿತಿದ್ದಾರೆ. ಈ ನಿರ್ಧಾರವೇ ನನಗೆ ಅರ್ಥವಾಗುವುದಿಲ್ಲ. ಆಟಗಾರ ಫಾರ್ಮ್ ನಲ್ಲಿದ್ದಾಗ ಆಡಬೇಕಾಗುತ್ತದೆ ಎಂದು ನಾನು ನಂಬುತ್ತೇನೆ. ಕೆ.ಎಲ್.ರಾಹುಲ್ ಅವರನ್ನು ತಂಡದಿಂದ ಹೊರಗಿಡುವುದರಲ್ಲಿ ಅರ್ಥವೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್

ಐದು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಸಂಪೂರ್ಣವಾಗಿ ವೈಟ್‍ವಾಶ್ ಆಗಿತ್ತು. ಆದಾಗ್ಯೂ, ಬಲವಾದ ಪುನರಾಗಮನವನ್ನು ಮಾಡಿದ ಕಿವೀಸ್ ಪಡೆ, ಏಕದಿನ ಸರಣಿಯ ಮೂರೂ ಪಂದ್ಯಗಳನ್ನು ಗೆದ್ದಿತ್ತು. ಈಗ ಎರಡು ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದು ಬೀಗಿದೆ.

ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಹೊಂದಿರುವ ಟೀಂ ಇಂಡಿಯಾ ವೆಲ್ಲಿಗ್ಟನ್ ನಲ್ಲಿ ನಡೆದ ಎರಡೂ ಇನ್ನಿಂಗ್ಸ್ ಗಳಲ್ಲಿ ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲವಾಗಿತ್ತು. ಇದೇ ಮೊದಲ ಟೆಸ್ಟ್ ಸೋಲಿಗೆ ಕಾರಣ ಎಂದು ಕೊಹ್ಲಿ ಸ್ವತಃ ಒಪ್ಪಿಕೊಂಡಿದ್ದರು.

ಕ್ರೈಸ್ಟ್‌ಚರ್ಚ್ ನ ಹ್ಯಾಗ್ಲಿ ಓವಲ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವು ಶನಿವಾರ ಆರಂಭವಾಗಲಿದೆ. ಈ ಪಂದ್ಯವನ್ನು ಭಾರತ ಗೆಲ್ಲಬೇಕಿದೆ. ಒಂದು ವೇಳೆ  ಸೋತರೆ ಟೀಂ ಇಂಡಿಯಾ ಟೆಸ್ಟ್ ನಲ್ಲಿಯೂ ವೈಟ್‍ವಾಶ್ ತುತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *