ಕಪಟ ನಾಟಕ ಪಾತ್ರಧಾರಿಣಿ ಸಂಗೀತಾ ಭಟ್!

Public TV
1 Min Read

ಬೆಂಗಳೂರು: ಗರುಡ ಕ್ರಿಯೇಷನ್ಸ್ ಸ್ಕ್ರೀನ್ಸ್  ಪ್ರೈವೇಟ್ ಲಿಮಿಟೆಡ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರ ಕಪಟ ನಾಟಕ ಪಾತ್ರಧಾರಿ. ಹತ್ತು ಮಂದಿ ಸ್ನೇಹಿತರು ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಒಂದು ಯಶಸ್ವಿ ಸಿನಿಮಾ ಬಗ್ಗೆ ಬಿಡುಗಡೆಯ ಹಂತದಲ್ಲಿ ಕೆನೆಗಟ್ಟಿಕೊಳ್ಳುವ ಸದಾಭಿಪ್ರಾಯವಿದೆಯಲ್ಲಾ? ಅಂಥಾ ಗಾಢ ವಾತಾವರಣದೊಂದಿಗೆ ಈ ಚಿತ್ರ ಇದೇ ನವೆಂಬರ್ ಎಂಟನೇ ತಾರೀಕಿನಂದು ಬಿಡುಗಡೆಗೆ ರೆಡಿಯಾಗಿದೆ. ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಸಂಗೀತಾ ಭಟ್ ಭಿನ್ನ ಪಾತ್ರದ ಮೂಲಕ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

ಸಂಗೀತಾ ಭಟ್ ಎರಡನೇ ಸಲ ಮುಂತಾದ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು. ಈ ಪ್ರತಿಭೆಯ ಕಾರಣದಿಂದಲೇ ಅವರು ಕಪಟ ನಾಟಕ ಪಾತ್ರಧಾರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ನಿರ್ದೇಶಕ ಕ್ರಿಶ್ ನಾಯಕನ ಪಾತ್ರಕ್ಕೆ ಬಾಲು ನಾಗೇಂದ್ರ ಅವರನ್ನು ಪಕ್ಕಾ ಮಾಡಿಕೊಂಡ ನಂತರದಲ್ಲಿ ನಾಯಕಿಯ ಪಾತ್ರವನ್ನು ಯಾರು ನಿಭಾಯಿಸುತ್ತಾರೆಂಬ ಬಗ್ಗೆ ಹಲವಾರು ದಿನಗಳ ಕಾಲ ಆಲೋಚಿಸಿದ್ದರಂತೆ. ಕಡೆಗೂ ಅವರ ಕಣ್ಣಿಗೆ ಬಿದ್ದಿದ್ದು ಎರಡನೇ ಸಲ ಚಿತ್ರದ ಚೆಲುವೆ ಸಂಗೀತಾ ಭಟ್.

ಆರಂಭದಲ್ಲಿ ಈ ಕಥೆ ಕೇಳಿದಾಕ್ಷಣವೇ ಒಂದೇ ಸಲಕ್ಕೆ ಸಂಗೀತಾ ಭಟ್ ನಟಿಸೋ ನಿರ್ಧಾರ ಪ್ರಕಟಿಸಿದ್ದರಂತೆ. ಆ ನಂತರದಲ್ಲಿ ಈವರೆಗೂ ಕೂಡಾ ಸಂಗೀತಾ ಚಿತ್ರತಂಡಕ್ಕೆ ಸಂಪೂರ್ಣ ಸಾಥ್ ಕೊಡುತ್ತಾ ಬಂದಿದ್ದಾರೆ. ಇದೀಗ ವಿದೇಶದಲ್ಲಿ ನೆಲೆಸಿದ್ದರೂ ಸಹ ಸಾಮಾಜಿಕ ಜಾಲತಾಣಗಳ ಮೂಲಕವೇ ಈ ಚಿತ್ರದ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸಿರೋ ಪಾತ್ರ ಕೂಡಾ ವಿಶೇಷವಾದದ್ದೇ. ಅವರಿಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಹುಡುಗಿಯಾಗಿ ಆ ಪಾತ್ರವನ್ನು ಜೀವಿಸಿದಷ್ಟೇ ತೀವ್ರವಾಗಿ ನಟಿಸಿದ್ದಾರಂತೆ. ಹೀಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾ ಆಟೋ ಡ್ರೈವರ್ ಜೊತೆ ಪ್ರೀತಿಗೆ ಬೀಳೋ ಆ ಪಾತ್ರ ಇಡೀ ಚಿತ್ರದ ಕೇಂದ್ರ ಬಿಂದುವೂ ಹೌದು. ಅದರ ಚಹರೆಗಳೆಲ್ಲ ಇದೇ ನವೆಂಬರ್ 8ರಂದು ಸ್ಪಷ್ಟವಾಗಿಯೇ ಜಾಹೀರಾಗಲಿವೆ.

Share This Article
Leave a Comment

Leave a Reply

Your email address will not be published. Required fields are marked *