ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

Public TV
1 Min Read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಅಡಿಗಡಿಗೆ ಪ್ರೇಕ್ಷಕರ ಮನ ಗೆಲ್ಲುವಂಥಾ ಸಿನಿಮಾಗಳನ್ನು ಸೃಷ್ಟಿಸುತ್ತಿವೆ. ಆ ಸಾಲಿನಲ್ಲಿ ಕ್ರಿಶ್ ನಿರ್ದೇಶನದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವೂ ಸೇರಿಕೊಂಡಿದೆ. ಈ ಹಿಂದೆ ‘ಹುಲಿರಾಯ’ ಎಂಬ ಚಿತ್ರದ ಮೂಲಕ ನಾಯಕನಾಗಿ ಆರ್ಭಟಿಸಿದ್ದ ಬಾಲು ನಾಗೇಂದ್ರ ಅವರ ಅದ್ಭುತ ನಟನೆ, ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಬೇರೆಯದ್ದೇ ಅನುಭೂತಿಯನ್ನು ಪ್ರತಿ ಪ್ರೇಕ್ಷಕರಲ್ಲಿಯೂ ತುಂಬಿಸುವ ಅಮೋಘವಾದ ಕಥೆಯೊಂದಿಗೆ ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ.

ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಹೀಗೆಂದರೆ ನಂಬಲು ತುಸು ಕಷ್ಟವಾಗುವಂಥಾ ಅಚ್ಚುಕಟ್ಟುತನದೊಂದಿಗೆ ಅವರು ಕಪಟ ನಾಟಕ ಪಾತ್ರಧಾರಿಯನ್ನು ರೂಪಿಸಿದ್ದಾರೆ. ಇಲ್ಲಿನ ಕಥೆ ಒಂದು ರೀತಿಯಲ್ಲಿ ವಿಶೇಷವಾಗಿದ್ದರೆ, ನಿರ್ದೇಶಕರು ಅದನ್ನು ನಿರೂಪಣೆ ಮಾಡಿರೋ ರೀತಿ ಮತ್ತೊಂದು ಥರದಲ್ಲಿ ವಿಶಿಷ್ಟವಾಗಿದೆ. ಇದರಲ್ಲಿನ ಪಾತ್ರಗಳಿಗೆ ಬಾಲು ನಾಗೇಂದ್ರ, ಸಂಗೀತಾ ಭಟ್ ಮತ್ತು ಇತರೇ ತಾರಾಗಣ ಜೀವ ತುಂಬಿರೋ ರೀತಿಯಂತೂ ಇಡೀ ಸಿನಿಮಾದ ಪ್ರಮುಖ ಶಕ್ತಿಯೆಂದರೂ ಅತಿಶಯವಲ್ಲ. ಒಟ್ಟಾರೆಯಾಗಿ ಒಂದಕ್ಕೊಂದು ಪೂರಕವಾದ ಎಲ್ಲ ಅಂಶಗಳು ಒಗ್ಗೂಡಿಕೊಂಡು ಕಪಟ ನಾಟಕ ಪಾತ್ರಧಾರಿಯನ್ನು ಪುಷ್ಕಳ ಗೆಲುವಿನತ್ತ ಸರಾಗವಾಗಿಯೇ ಕರೆದೊಯ್ಯುತ್ತಿವೆ.

ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಒಂದಂಶವನ್ನು ಪ್ರಧಾನವಾಗಿ ಪರಿಗಣಿಸಿದರೆ ಸಾಕಾಗುತ್ತದೆ. ಆದರೆ ನಿರ್ದೇಶಕ ಕ್ರಿಶ್ ಕಪಟ ನಾಟಕ ಪಾತ್ರಧಾರಿ ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಮೆಚ್ಚುಗೆಯಾಗಬೇಕೆಂಬ ಉದ್ದೇಶದಿಂದಲೇ ಈ ಕಥೆಯನ್ನು ರೂಪಿಸಿದ್ದಾರೆ. ಅದರಲ್ಲಿ ಯಶವನ್ನೂ ಕಂಡಿದ್ದಾರೆ. ಇಲ್ಲಿ ರೋಚಕ ತಿರುವುಗಳಿವೆ, ಹಾರರ್ ಅಂಶಗಳಿವೆ, ಮಾಸ್, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲವೂ ಇವೆ. ಆದರೆ ಕಥೆ ಎತ್ತ ಹೊರಳಿಕೊಂಡರೂ ಮನೋರಂಜನೆಗೆ ಮಾತ್ರ ಯಾವ ಕಾರಣದಿಂದಲೂ ಕೊರತೆಯಾಗದಂತೆ ಕ್ರಿಶ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆದ ಕಾರಣದಿಂದಲೇ ಇದು ಎಲ್ಲ ವರ್ಗದ ಪ್ರೇಕ್ಷಕರೂ ತಲೆದೂಗಿ ಮೆಚ್ಚಿಕೊಳ್ಳುವಂತೆ ಮೂಡಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *