ಕಾಂತಾರ ಶೂಟಿಂಗ್ ಶುರು: ‘ರಾಜನ’ ಪಾತ್ರಧಾರಿಗೆ ದೈವದ ಅಭಯ

Public TV
1 Min Read

ರಿಷಬ್ ಶೆಟ್ಟಿ (Rishabh Shetty) ಸದ್ದಿಲ್ಲದೇ ಕಾಂತಾರ 1 (Kantara) ಸಿನಿಮಾದ ಶೂಟಿಂಗ್ (Shooting) ಪ್ರಾರಂಭಿಸಿದ್ದಾರೆ. ಕುಂದಾಪುರದಲ್ಲಿ ಹಾಕಿರುವ ಸೆಟ್ ನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ರಾಜನ ಪಾತ್ರವನ್ನು ಮಾಡುತ್ತಿರುವ ವಿನಯ್ ಬಿದ್ದಪ್ಪ (Vinay Biddappa) ದೈವದ ಸನ್ನಿಧಿಗೆ ಹೋಗಿದ್ದಾರೆ. ಸಿನಿಮಾ ಕುರಿತಂತೆ ದೈವ ಅವರಿಗೆ ಅಭಯ ನೀಡಿದೆ.

ಇತ್ತೀಚೆಗಷ್ಟೇ ಪುತ್ತೂರಿನ ಪನಡ್ಕದಲ್ಲಿ ನಡೆದ ದೈವದ ನೇಮದಲ್ಲಿ ಕಲ್ಲುರ್ಟಿ ದೈವದ ಬಳಿ ಕಾಂತಾರದಲ್ಲಿ ರಾಜನ ಪಾತ್ರವನ್ನು ನಿರ್ವಹಿಸುತ್ತಿರುವ ವಿನಯ್ ಬಿದ್ದಪ್ಪ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಧರ್ಮಕ್ಕೆ ಅಪಚಾರ ಆಗದಂತೆ ಸಿನಿಮಾ ಮಾಡಿ ಎಂದು ದೈವ ಅಭಯ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ, ಕಿರುತೆರೆ, ಯಕ್ಷಗಾನ ಮತ್ತು ಇತರ ಯಾವುದೇ ಸಮಾರಂಭದಲ್ಲಿ ದೈವವನ್ನು ತೋರಿಸಬಾರದು ಎನ್ನುವ ಹೋರಾಟ ನಡೆದಿದೆ. ಕಾಂತಾರ ಚಿತ್ರಕ್ಕೂ ಈ ಬಿಸಿ ತಾಗಲಿದೆ ಎಂದು ಹೇಳಲಾಗಿತ್ತು. ಆದರೆ, ದೈವಗಳು ಈ ಚಿತ್ರಕ್ಕೆ ಅಭಯ ನೀಡುತ್ತಿವೆ. ಹಾಗಾಗಿ ಯಾವುದೇ ಮಂಡೆಬಿಸಿ ಇಲ್ಲದೇ ಶೆಟ್ಟರು ಸಿನಿಮಾ ಮಾಡುತ್ತಿದ್ದಾರೆ.

 

ಕಾಂತಾರ 1 ಚಿತ್ರಕ್ಕಾಗಿಯೇ ಬೃಹತ್ ಸೆಟ್ ಗಳನ್ನು ಹಾಕಲಾಗಿದ್ದು, ಸದ್ಯ ಅದೇ ಸೆಟ್ ನಲ್ಲೇ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಟೀಮ್ ಬಿಟ್ಟರೆ ಬೇರೆಯವರಿಗೆ ಅಲ್ಲಿ ಅವಕಾಶವಿಲ್ಲದಂತೆ ಕಾಳಜಿ ವಹಿಸಲಾಗಿದೆ. ಹಾಗಾಗಿ ಶೂಟಿಂಗ್ ನಡೆಯುತ್ತಿರುವ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ.

Share This Article