– ರಕ್ತ ಸಿಕ್ತ ಅವತಾರದಲ್ಲಿ ಡಿವೈನ್ ಸ್ಟಾರ್ ಘರ್ಜನೆ, ನಿಗದಿತ ದಿನಾಂಕದಂದೇ ಸಿನಿಮಾ ರಿಲೀಸ್
ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ʻಕಾಂತಾರ ಚಾಪ್ಟರ್ 1ʼ (Kantara Chapter 1) ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗುತ್ತಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ, ಏಕಕಾಲಕ್ಕೆ 7 ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಹೊಂಬಾಳೆ ಫಿಲಂಸ್ ಮಾಹಿತಿ ಹಂಚಿಕೊಂಡಿದೆ.
View this post on Instagram
ರಿಷಬ್ ಶೆಟ್ಟಿ ಅವರಿಗೆ ಇಂದು (ಜುಲೈ 7) ಜನ್ಮದಿನ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಹೊತ್ತಿನಲ್ಲೇ ‘ಕಾಂತಾರ: ಚಾಪ್ಟರ್ 1ʼ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ. ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿರೋ ತಂಡ ವಿಶೇಷ ಮಾಹಿತಿ ಒಂದನ್ನು ನೀಡಿದೆ. ಇದು ಡಿವೈನ್ ಸ್ಟಾರ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಈ ಬಾರಿ ಅ.2ರ ಗಾಂಧಿ ಜಯಂತಿ ಗುರುವಾರ ಬಿದ್ದಿದೆ. ಹೀಗಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಿನಿಮಾ ಸಹಜವಾಗಿಯೇ ಒಳ್ಳೆಯ ಕಲೆಕ್ಷನ್ ಮಾಡಲಿದೆ. ಆ ಬಳಿಕ ಅಕ್ಟೋಬರ್ ಮಧ್ಯದಲ್ಲಿ ದೀಪಾವಳಿ ಬರಲಿದೆ. ಇದು ಕೂಡ ಸಿನಿಮಾಗೆ ಸಹಕಾರಿ ಆಗಲಿದೆ. ಇಂಥ ಚಾನ್ಸ್ನ ತಂಡ ಬಿಡಲು ರೆಡಿ ಇಲ್ಲ. ಹೀಗಾಗಿ, ಅದಕ್ಕೆ ತಕ್ಕಂತೆ ಕೆಲಸ ನಡೆಯುತ್ತಿದ್ದು, ಅ.2ರಂದೇ ಸಿನಿಮಾ ರಿಲೀಸ್ ತೆರೆಗೆ ಬರುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ರಕ್ತಸಿಕ್ತ ಅವತಾರದಲ್ಲಿ ಪೋಸ್ಟರ್
ಹುಟ್ಟುಹಬ್ಬದ ದಿನವೇ ರಿಷಬ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿರುವ ಚಿತ್ರತಂಡ ʻದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ.ʼ ಎನ್ನುವ ಸಾಲಿನೊಂದಿಗೆ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಈ ಅದ್ಧೂರಿ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಕೈಯಲ್ಲಿ ಕೊಡಲಿ ಹಾಗೂ ಗುರಾಣಿ ಹಿಡಿದಿದ್ದಾರೆ. ಗುರಾಣಿಗೆ ಬಾಣಗಳು ಚುಚ್ಚಿವೆ. ಹಿಂಭಾಗದಲ್ಲಿ ಬೆಂಕಿ ಇದೆ. ರಿಷಬ್ ಶೆಟ್ಟಿ ಮುಖದಲ್ಲಿ ಆಕ್ರೋಶದ ಜ್ವಾಲೆ ಎದ್ದು ಕಾಣುತ್ತಿದೆ. ರಕ್ತಸಿಕ್ತ ಅವತಾರದಲ್ಲಿ ಘರ್ಜಿಸುತ್ತಿರುವ ಡಿವೈನ್‌ಸ್ಟಾರ್ ಅವತಾರ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ.
ಕೆಲ ದಿನಗಳ ಹಿಂದೆಯಷ್ಟೇ ‘ಕಾಂತಾರ: ಚಾಪ್ಟರ್ 1’ ಚಿತ್ರದ ಸೆಟ್ನಲ್ಲಿ ಸಾಕಷ್ಟ ಅವಘಡಗಳು ಸಂಭವಿಸಿದವು. ಈ ಕಾರಣದಿಂದ ಸಿನಿಮಾ ರಿಲೀಸ್ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿತ್ತು. ಈ ವದಂತಿಗಳನ್ನು ತಳ್ಳಿಹಾಕಿರುವ ಚಿತ್ರತಂಡ ನಿಗದಿತ ದಿನಾಂಕದಂದೇ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿದೆ.