ದೈವಾರಾಧನೆ ಪವಿತ್ರವಾದದ್ದು.. ಅದನ್ನು ಅಪಹಾಸ್ಯ ಮಾಡಬೇಡಿ: ಪ್ರೇಕ್ಷಕರಿಗೆ ಹೊಂಬಾಳೆ ಫಿಲ್ಮ್ಸ್‌ ಮನವಿ

Public TV
2 Min Read

– ಕಾಂತಾರ ಚಾಪ್ಟರ್‌ 1 ವೀಕ್ಷಣೆ ವೇಳೆ ಅಭಿಮಾನಿಗಳ ಹುಚ್ಚಾಟಕ್ಕೆ ಬೇಸರ

ದೈವಾರಾಧನೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯ. ಅದನ್ನು ಹಾಸ್ಯಾಸ್ಪದವಾಗಿ ಅಣಕು ಪ್ರದರ್ಶನ ಮಾಡಬೇಡಿ ಎಂದು ‘ಕಾಂತಾರ ಚಾಪ್ಟರ್‌ 1’ ಸಿನಿಮಾ ಪ್ರೇಕ್ಷಕರಲ್ಲಿ ಹೊಂಬಾಳೆ ಫಿಲ್ಮ್ಸ್‌ ಮನವಿ ಮಾಡಿಕೊಂಡಿದೆ.

ಕಾಂತಾರ ಚಾಪ್ಟರ್‌ 1 ಸಿನಿಮಾ ಥಿಯೇಟರ್‌ಗಳಲ್ಲಿ ಕೆಲ ಪ್ರೇಕ್ಷಕರ ಅನುಚಿತ ವರ್ತನೆಗೆ ಹೊಂಬಾಳೆ ಫಿಲ್ಮ್ಸ್‌ ಬೇಸರ ವ್ಯಕ್ತಪಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

 

View this post on Instagram

 

A post shared by Hombale Films (@hombalefilms)

ಪೋಸ್ಟ್‌ನಲ್ಲಿ ಏನಿದೆ?
‘ತುಳುನಾಡಿನ ಸಂಸ್ಕೃತಿಯ ಪ್ರೌಢತೆಯ ಸಂಕೇತವಾದ ದೈವಾರಾಧನೆ ನಮ್ಮ ನಂಬಿಕೆ, ಭಕ್ತಿ ಹಾಗೂ ತಾಯ್ನಾಡಿನ ಹೆಮ್ಮೆಯ ಪ್ರತಿರೂಪವಾಗಿದೆ. ಕಾಂತಾರ ಮತ್ತು ಕಾಂತಾರ ಚಾಪ್ಟರ್‌ 1 ಚಿತ್ರಗಳನ್ನು ನಾವು ಗೌರವದೊಂದಿಗೆ ದೈವಗಳ ಮಹಿಮೆಯನ್ನು ಕೊಂಡಾಡುವ ಸದುದ್ದೇಶದಿಂದ ನಿರ್ಮಿಸಿದ್ದೇವೆ. ದೈವಾರಾಧನೆ ಗೌರವ ಹಾಗೂ ಅಚಲ ಭಕ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಇದರೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾರಿ ಯಶಸ್ವಿಯಾಗಿದ್ದೇವೆ. ಪ್ರೇಕ್ಷಕರಿಂದ ಬಂದಿರುವ ಅಪಾರವಾದ ಪ್ರೀತಿಗೆ ಹಾಗೂ ಪ್ರೋತ್ಸಾಹಕ್ಕೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಆದಾಗ್ಯೂ, ಇತ್ತೀಚೆಗೆ ಕೆಲವು ಜನರು ಚಿತ್ರದಲ್ಲಿ ತೋರಿಸಿದ ದೈವಪಾತ್ರಗಳನ್ನು ಅನುಕರಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಚಿತ್ರಗಳಲ್ಲಿ ತೋರಿಸಲಾದ ದೈವಾರಾಧನೆ ಅಥವಾ ದೈವಪೂಜೆ ಅತ್ಯಂತ ಪವಿತ್ರವಾದ ಆಧ್ಯಾತ್ಮಿಕ ಸಂಪ್ರದಾಯಕ್ಕೆ ಆಧಾರಿತವಾಗಿದೆ. ಇದನ್ನು ಹಾಸ್ಯಾಸ್ಪದವಾಗಿ ಅಣುಕು ಪ್ರದರ್ಶನ ಮಾಡುವಂತಿಲ್ಲ. ಇಂತಹ ಕೃತ್ಯಗಳು ನಮ್ಮ ನಂಬಿಕೆ ಮತ್ತು ಧಾರ್ಮಿಕ ಸಂವೇದನೆಯನ್ನು ಹೀನಗೊಳಿಸುತ್ತವೆ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡುತ್ತವೆ.

ಆದ್ದರಿಂದ, ಹೊಂಬಾಳೆ ಫಿಲ್ಮ್ಸ್‌, ಜನತೆ ಹಾಗೂ ಪ್ರೇಕ್ಷಕರಿಗೆ ಮನವಿ ಮಾಡಿಕೊಳ್ಳುತ್ತದೆ. ದೈವಪಾತ್ರಗಳನ್ನು ಅನುಕರಿಸುವುದು, ಧ್ವನಿಯನ್ನು ಹೋಲುವುದು ಅಥವಾ ಅವರ ರೂಪ-ವೇಷಧಾರಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೃತ್ಯಗಳಿಂದ ದೂರವಿರಿ. ಇದನ್ನು ಚಿತ್ರಮಂದಿರಗಳಲ್ಲಿ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಲಿ ಎಲ್ಲೂ ಮಾಡುವಂತಿಲ್ಲ. ದೈವಾರಾಧನೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಆರಾಧನೆಯ ಆಧ್ಯಾತ್ಮಿಕ ಮಹತ್ವವನ್ನು ಎಲ್ಲರೂ ಗುರುತಿಸಿ, ಗೌರವದಿಂದ ನಡೆದುಕೊಳ್ಳಬೇಕು. ನಮ್ಮ ಚಿತ್ರಗಳ ಮೂಲಕ ನಾವು ಸಂಭ್ರಮಿಸಿದ ನಂಬಿಕೆಯನ್ನು ಯಾವುದೇ ಸಂದರ್ಭದಲ್ಲಿ ಹಾಸ್ಯಾಸ್ಪದವಾಗಲು ಅವಕಾಶ ನೀಡಬಾರದು. ಈ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಪವಿತ್ರತೆಯನ್ನು ಕಾಪಾಡಲು ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಹೊಂಬಾಳೆ ಫಿಲ್ಮ್ಸ್‌ ಮನವಿ ಮಾಡಿಕೊಂಡಿದೆ.

ದೇಶ-ವಿದೇಶಗಳಲ್ಲಿ ಅ.2 ರಂದು ರಿಲೀಸ್‌ ಆದ ಕಾಂತಾರ ಚಾಪ್ಟರ್‌ 1 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಸಿನಿಮಾ ನೋಡಿ ಕೆಲ ಪ್ರೇಕ್ಷಕರು ಭಾವೋದ್ವೇಗಕ್ಕೆ ಒಳಗಾಗಿ, ದೈವದಂತೆ ನರ್ತಿಸುವುದು, ಕೂಗುವುದು.. ಹೀಗೆ ಹಾಸ್ಯಾಸ್ಪದ ರೀತಿಯಲ್ಲಿ ಅಣಕು ಪ್ರದರ್ಶನ ಮಾಡುತ್ತಿದ್ದಾರೆ. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ದೈವಗಳ ವಿಚಾರವಾಗಿ ಹೀಗೆ ಹುಚ್ಚಾಟ ಮಾಡುವವರಿಗೆ ಬುದ್ಧಿ ಹೇಳಿ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ತುಳುಕೂಟ ಪತ್ರ ಬರೆದಿತ್ತು. ಅದರಂತೆ ಹೊಂಬಾಳೆ ಫಿಲ್ಮ್ಸ್‌ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

Share This Article