ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಾಂತಾರ’ಕ್ಕೆ ವಿಶೇಷ ಸ್ಥಾನ: ಸುಮಲತಾ ಬಣ್ಣನೆ

Public TV
1 Min Read

ನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಾಂತಾರ-1 (Kantara-1) ಚಿತ್ರ ವಿಶೇಷ ಸ್ಥಾನ ಪಡೆಯಲಿದೆ ಎಂದು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ (Sumalatha Ambareesh) ಶ್ಲಾಘಿಸಿದ್ದಾರೆ.

ಶುಕ್ರವಾರ ಕಾಂತಾರ-1 ಚಿತ್ರ ವೀಕ್ಷಿಸಿದ ಬಳಿಕ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಅವರು, ರಿಷಬ್ ಶೆಟ್ಟಿ ನಿರ್ದೇಶನ, ಹಾಗೂ ಸಿನಿಮಾದ ಬಗ್ಗೆ ಕೊಂಡಾಡಿದ್ದಾರೆ.

ಎಕ್ಸ್‌ನಲ್ಲಿ ಏನಿದೆ?
ಆತ್ಮೀಯ ರಿಷಭ್ ಅವರೇ, ಶುಕ್ರವಾರ ಕಾಂತಾರ-1 ನೋಡಿದೆ. ಕಾಂತಾರದ ಅದ್ಭುತ ಯಶಸ್ಸಿಗೆ ಅಭಿನಂದನೆಗಳು. ನಿಮ್ಮ ನಿರ್ದೇಶನ ಹಾಗೂ ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ ಪರಿ ನನ್ನನ್ನು ಮೂಕವಿಸ್ಮಿತಗೊಳಿಸಿದೆ. ಈ ದೃಶ್ಯ ವೈಭವವನ್ನು ತೆರೆಯ ಮುಂದೆ ತರಲು ಹಾಕಿದ ಪರಿಶ್ರಮ ಹಾಗೂ ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸೌಂದರ್ಯವನ್ನು ಪ್ರದರ್ಶಿಸಲು ನಿಮ್ಮ ಶ್ರಮವನ್ನು ಅತ್ಯಂತ ಗೌರವ ಹಾಗೂ ಹೆಮ್ಮೆಯಿಂದ ಶ್ಲಾಘಿಸುತ್ತೇನೆ.

ಅಕ್ಷರಶಃ ಇದೊಂದು ಸಿನಿಮಾಟಿಕ್ ಮಾಸ್ಟರ್‌ಪೀಸ್. ಕಾಂತಾರ-1 ಕನ್ನಡ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಲೆಯ ಬಗ್ಗೆ ನಿಮಗಿರುವ ಉತ್ಸಾಹ ಮತ್ತು ಶ್ರದ್ಧೆ ಯುವ ಕಲಾವಿದರು ಹಾಗೂ ಚಿತ್ರರಂಗಕ್ಕೆ ಸ್ಫೂರ್ತಿಯಾಗಿದೆ.

ಇಡೀ ಕಾಂತಾರ ತಂಡವು ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಂಸೆಗೆ ಅರ್ಹವಾಗಿದೆ. ಕನ್ನಡ ಚಿತ್ರರಂಗದ ಪಯಣಕ್ಕೆ ಹೊಸ ಆಯಾಮವನ್ನು ಹಾಕಿಕೊಟ್ಟಿರುವ ಈ ದಂತಕಥೆ ಕನ್ನಡ ಚಿತ್ರರಂಗದ ಇತಿಹಾಸ ಪುಟದಲ್ಲಿ ವಿಶೇಷ ಸ್ಥಾನ ಪಡೆಯಲಿದೆ.

ನಮ್ಮ ಚಿತ್ರರಂಗಕ್ಕೆ ವಿಶ್ವದಾದ್ಯಂತ ಗೌರವ ಮತ್ತು ಕೀರ್ತಿಯನ್ನು ತಂದಿರುವ ನಿಮ್ಮ ಮುಂದಿನ ಎಲ್ಲಾ ಯೋಜನೆಗಳು ಇನ್ನಷ್ಟು ಯಶಸ್ಸನ್ನು ತಂದುಕೊಡಲಿ ಎಂದು ಶುಭ ಹಾರೈಸುವೆ ಎಂದು ಬಣ್ಣಿಸಿದ್ದಾರೆ.

Share This Article