ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

By
2 Min Read

ನ್ನೇರಿ..ನೀನಾಸಂ ಮಂಜು ನಿರ್ದೇಶನದ ಬಹಳ ನಿರೀಕ್ಷೆ ಮೂಡಿಸಿರುವ ಚಿತ್ರ. ನೆಲೆಗಾಗಿ ನಿರ್ವಸತಿಗರ ಪಡಿಪಾಟಲು, ನಗರದಲ್ಲಿ ಬದುಕನ್ನರಸುತ್ತಿರುವ ಹೆಣ್ಣು ಜೀವಗಳ ಕಷ್ಟ ಕೋಟಲೆಗಳು ಇದನ್ನೆಲ್ಲ ಒಟ್ಟುಗೂಡಿಸಿ ಕಮರ್ಶಿಯಲ್ ಎಳೆಯಲ್ಲಿ ಅಷ್ಟೇ ಮನಸ್ಸಿಗೂ ನಾಟುವಂತೆ ಹೆಣೆದ ಕಥೆ ಕನ್ನೇರಿ. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಪವರ್ ಫುಲ್ ಸಂದೇಶವನ್ನಿಟ್ಟುಕೊಂಡು ನಿರ್ಮಾಣವಾಗಿರುವ ಈ ಚಿತ್ರ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೂ ಕಾಲಿಡಲಿದೆ. ಸದ್ಯ ಬಿಡುಗಡೆಯಾಗುತ್ತಿರುವ ಚಿತ್ರದ ಒಂದೊಂದೇ ಸ್ಯಾಂಪಲ್ ಗಳು ಚಿತ್ರ ಪ್ರೇಮಿಗಳ ಚಿತ್ತವನ್ನು ಸೆಳೆಯುತ್ತಿದ್ದು ಇದೀಗ ಮತ್ತೊಂದು ಬಹು ನಿರೀಕ್ಷಿತ ಹಾಡೊಂದನ್ನು ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ ಕನ್ನೇರಿ ಚಿತ್ರತಂಡ.


ಈಗಾಗಲೇ ಬಿಡುಗಡೆಯಾಗಿರುವ ‘ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡು ಕಟ್ಟಿ, ‘ನೆಲೆ ಇರದ ಕಾಲು ಹುಡುಕುತಿದೆ ಬಾಳು’ ಎರಡು ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ, ಕೇಳುಗರ ಮನದಲ್ಲಿ ಅಚ್ಚುತ್ತಿವೆ. ಈಗ ಚಿತ್ರತಂಡ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡಿನ ವೀಡಿಯೋ ಬಿಡುಗಡೆ ಮಾಡಿದೆ. ಹೆಣ್ಣು ಮಗಳೊಬ್ಬಳು ತಾನು ಹುಟ್ಟಿ ಬೆಳೆದ ಮನೆ, ಊರನ್ನು ಬಿಟ್ಟು ಬೇರೆಡೆಗೆ ದುಡಿಯಲು ಹೊರಟಾಗ ಅನುಭವಿಸುವ ನೋವು, ಮರುಕವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಎಂತವರಿಗಾದರೂ ಹಾಡು ನೋಡುತ್ತಿದ್ರೆ ಕರುಳು ಹಿಂಡಿ ಬರುತ್ತದೆ. ಅಂದ್ಹಾಗೆ ಈ ಹಾಡಿಗೆ ಕೊಟಿಗಾನಹಳ್ಳಿ ರಾಮಯ್ಯ ಸಾಹಿತ್ಯ ಬರೆದಿದ್ದು, ಕೀರ್ತನ್ ಹೊಳ್ಳ, ಇಂದು ನಾಗರಾಜ್ ಭಾವ ತುಂಬಿ ಹಾಡಿದ್ದಾರೆ. ಸದ್ಯ ಬಿಡುಗಡೆಯಾದ ಈ ಹಾಡು ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.


ಕನ್ನೇರಿ ನೈಜಘಟನೆಯನ್ನು ಆಧಾರಿಸಿದ ಚಿತ್ರ, ಹಾಗೆಯೇ ಇದೊಂದು ಮಹಿಳಾ ಪ್ರಧಾನ ಚಿತ್ರ ಕೂಡ. ಈ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಸ್ಪೂರ್ತಿಯಾಗಿ ಪಡೆದಿದ್ದು ಕೊಡಗಿನ ದಿಡ್ಡಳ್ಳಿ ಹೋರಾಟ ಹಾಗೂ ಲೇಖಕ ಕ್ಷೀರಸಾಗರ ಅವರ ಜೇನು ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು. ಇವುಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಕೊಟಿಗಾನಹಳ್ಳಿ ರಾಮಯ್ಯ ಸಿನಿಮ್ಯಾಟಿಕ್ ಆಗಿ ಕಥೆ ಹೆಣೆಯುವ ಜವಾಬ್ದಾರಿಯನ್ನು ನಿಭಾಯಿಸಿದ್ದು, ಚಿತ್ರಕಥೆ ಹಾಗೂ ನಿರ್ದೇಶನದ ನೊಗವನ್ನು ನೀನಾಸಂ ಮಂಜು ಹೊತ್ತುಕೊಂಡಿದ್ದಾರೆ.

ಹಲವಾರು ಅಂತರಾಷ್ಟ್ರೀಯ ವೇದಿಕೆಗಳಿಗೆ ಆಯ್ಕೆಯಾಗಿ ಗಮನ ಸೆಳೆದಿರುವ ಕನ್ನೇರಿ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಸ್ಟ್ರಾಂಗ್ ಕಂಟೆಂಟ್ ಹೊತ್ತು ಬರುತ್ತಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನವಿದೆ. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡ ಕಲಾವಿದರ ತಾರಾಗಣವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ ಪಿ ಹೆಬ್ಬಾರ್ ಮತ್ತು ಚಂದ್ರಶೇಖತ್ ಬಂಡವಾಳ ಹೂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *