ಪಾಕ್ ಶೆಲ್ ದಾಳಿ, ಯುದ್ಧದ ತೀವ್ರತೆಯ ಅನುಭವ ಬಿಚ್ಚಿಟ್ಟ ಕಾಶ್ಮೀರದಿಂದ ಮರಳಿದ ಕನ್ನಡಿಗ ವಿದ್ಯಾರ್ಥಿಗಳು

Public TV
2 Min Read

ಬೆಂಗಳೂರು: ಭಾರತ-ಪಾಕಿಸ್ತಾನ (India-Pakistan) ಉದ್ವಿಗ್ನತೆ ನಡುವೆ ಕಾಶ್ಮೀರದಲ್ಲಿ (Kashmir) ಸಿಲುಕಿಕೊಂಡಿದ್ದ ಕನ್ನಡಿಗ ವಿದ್ಯಾರ್ಥಿಗಳು ಇಂದು ಬೆಂಗಳೂರಿಗೆ (Bengaluru) ಮರಳಿದ್ದು, ಗಡಿಯಲ್ಲಿ ಯುದ್ಧ ಭೀತಿಯ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಳೆದ 6 ತಿಂಗಳ ಹಿಂದೆ ಶ್ರೀನಗರದ (Srinagar) ಶೇರಿ ಇ ಕಾಶ್ಮೀರ ಎಂಬ ಕೃಷಿ ವಿಶವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು 13 ವಿದ್ಯಾರ್ಥಿಗಳು ತೆರಳಿದ್ದರು. ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾದಾಟ ತೀವ್ರವಾಗಿತ್ತು. ಈ ಹಿನ್ನೆಲೆ ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಈ ನಡುವೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಿಂದಾಗಿ ಭಯಭೀತರಾಗಿದ್ದ ವಿದ್ಯಾರ್ಥಿಗಳು ಮೂರು ದಿನಗಳ ಪ್ರಯಾಣದ ಬಳಿಕ ಇಂದು ತಮ್ಮ ತಾಯ್ನಾಡಿಗೆ ಮರಳಿದ್ದಾರೆ.ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್‌

ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ನೆರವಾಗಿದ್ದರು. ಬೆಂಗಳೂರಿಗೆ ಬಂದಿಳಿದ ಬಳಿಕ ಜೆಪಿ ನಗರದ ನಿವಾಸದಲ್ಲಿ ವಿದ್ಯಾರ್ಥಿಗಳು ನಿಖಿಲ್ ಕುಮಾರಸ್ವಾಮಿಯವರನ್ನು ಭೇಟಿಯಾದರು.

ಬಳಿಕ ಕೃಷಿ ವಿವಿಯ ವಿದ್ಯಾರ್ಥಿಗಳಾದ ಹರೀಶ್ ಹಾಗೂ ನೂತನ್ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ನಾನು ಮತ್ತು ನನ್ನ ಸ್ನೇಹಿತ ರಾತ್ರಿ ಬಂದ್ವಿ. ಕಳೆದ ಮೂರು ದಿನಗಳ ಹಿಂದೆ ಶ್ರೀನಗರದಿಂದ ಬಸ್‌ನಲ್ಲಿ ಹೊರಟು ಜಮ್ಮು ತಲುಪಿದ್ದೆವು. ಬಳಿಕ ಅಲ್ಲಿಂದ ರೈಲಿನಲ್ಲಿ ಹೊರಟು ದೆಹಲಿಗೆ ಬಂದ್ವಿ. ಅಲ್ಲಿಂದ ವಿಮಾನದಲ್ಲಿ ಹೊರಟು ರಾತ್ರಿ ಬೆಂಗಳೂರಿಗೆ ತಲುಪಿದ್ದೇವೆ. ಜಮ್ಮು ಮತ್ತು ಶ್ರೀನಗರದಲ್ಲಿ ಬ್ಲ್ಯಾಕ್‌ಔಟ್‌ ಮಾಡುತ್ತಿದ್ದರು. ರಾತ್ರಿ ವೇಳೆ ತುಂಬಾ ಭಯ ಆಗುತ್ತಿತ್ತು. ಒಂದು ಸಣ್ಣ ಲೈಟ್ ಕೂಡ ಆನ್ ಇರುತ್ತಿರಲಿಲ್ಲ. ನಾವು ಕೃಷಿ ವಿವಿ ಆವರಣ ಬಿಟ್ಟು ಹೊರಗಡೆ ಹೋಗುತ್ತಿರಲಿಲ್ಲ. ಆದರೆ `ಆಪರೇಷನ್ ಸಿಂಧೂರ’ದ ಸಂದರ್ಭದಲ್ಲಿ ಭಾರೀ ಸ್ಫೋಟದ ಶಬ್ದ ಕೇಳುತ್ತಿತ್ತು. ಆಗ ತುಂಬಾ ಭಯ ಆಗಿತ್ತು. ಆದರೆ ಶ್ರೀನಗರದ ಲೋಕಲ್ ವಿದ್ಯಾರ್ಥಿಗಳು ನಮಗೆ ಧೈರ್ಯ ತುಂಬಿದ್ದರು. ಇಂದು ಕರ್ನಾಟಕಕ್ಕೆ ವಾಪಸ್ ಬರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಪೋರ್ಟ್ ಮಾಡಿದೆ ಎಂದು ತಿಳಿಸಿದರು.

ಮೊದಲ ಸೆಮಿಸ್ಟರ್ ಪರೀಕ್ಷೆ ಮುಗಿದು ಕಾಲೇಜು ಪ್ರಾರಂಭವಾಗಿದೆ. ಆದರೆ ಭಾರತ-ಪಾಕಿಸ್ತಾನ ಯುದ್ಧ ಭೀತಿಯಿರುವ ಕಾರಣ ಈಗ ಕಾಲೇಜಿಗೆ ರಜೆ ಕೊಡಲಾಗಿದೆ. ನಾಳೆಯಿಂದ ಆನ್‌ಲೈನ್ ತರಗತಿ ನಡೆಯಲಿದೆ ಎಂದು ವಿವಿ ತಿಳಿಸಿದೆ ಎಂದು ಹೇಳಿದರು.ಇದನ್ನೂ ಓದಿ: INS ವಿಕ್ರಾಂತ್ ಎಲ್ಲಿದೆ ಹೇಳಿ – ಪಿಎಂ ಕಚೇರಿ ಅಧಿಕಾರಿಯಂತೆ ಕರೆ ಮಾಡಿದ್ದವ ಅರೆಸ್ಟ್‌

Share This Article