ಕೃಷ್ಣವಂಶಿ: ನಾಚಿಕೆ ಕೃಷ್ಣನ ಜೊತೆ ವಂಶಿ ಡೇಟ್ ಫಿಕ್ಸ್

2 Min Read

ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಉದಯ ವಾಹಿನಿ ಇದೀಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ (Krishna Vamshi) ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2 ರಿಂದ ರಾತ್ರಿ 9:30 ಕ್ಕೆ ಪ್ರಸಾರ ಆರಂಭಿಸಲಿರುವ ‘ಕೃಷ್ಣವಂಶಿ’ ಧಾರಾವಾಹಿ ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೇಮಕಥಾ ಹಂದರ ಹೊಂದಿದೆ. ಒಳ್ಳೆ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೋಟೆಲ್ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ.

ಹಿನ್ನೆಲೆಯಾಗಿ ಬಿಟ್ಟಿರಲಾಗದ ತಂದೆಯ ಮಮತೆಯ ಕತೆ ಇದೆ. ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಜೀವಾಳ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆಯೂ ಇದೆ. ಆದರೆ‌, ವಂಶಿಯ ಕನಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ. ಅವಳು ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೆ ಬದುಕುವ ಕನಸು ಹೊತ್ತಿದ್ದಾಳೆ. ಅವಳ ಆಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಸಾಗಲು ಕಷ್ಟಪಡಬೇಕಿದೆ. ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶಿಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾ ಹಂದರ. ಇದನ್ನೂ ಓದಿ: ವಿಸ್ಪರ್ಸ್ ಆಫ್ ದಿ ರಿವರ್: ಸ್ಯಾಂಡಲ್‌ವುಡ್‌ನಲ್ಲೊಂದು ವಿಭಿನ್ನ ಪ್ರಯತ್ನ

ನಾಯಕ ಕೃಷ್ಣನಾಗಿ ರೋಹನ್ ಎ. ಹಾಗೂ ನಾಯಕಿ ವಂಶಿಯಾಗಿ ಶಾರದಾ ಪುಂಡಿ ಅಭಿನಯಿಸುತ್ತಿದ್ದು, ಗಿರಿಜಾ ಲೋಕೇಶ್, ಹನುಮಂತೇಗೌಡ, ಹಂಸ, ವಿಜಯ್, ರಜಿನಿ ಟಿ.ಡಿ., ಸಿದ್ದಾರ್ಥ ಮಾಧ್ಯಮಿಕ, ಸಿಂಧೂ ಪಿ., ಸಂದೀಪ್ ಎಸ್.ಆರ್., ಪುಷ್ಪ ಅನಿಲ್ ಕುಮಾರ್, ಸುಕೃತಾ ನಾಗ್ ಮತ್ತಿತರರ ತಾರಾಗಣವಿದೆ.

ಪರಿಣಿತ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ನಿರ್ಮಾಣ ಮಾಡುತ್ತಿರುವ ‘ಕೃಷ್ಣವಂಶಿ’ ಧಾರಾವಾಹಿಗೆ ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನವಿದೆ. ಮಾರ್ಚ್ 2 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ ಕೃಷ್ಣವಂಶಿ ಧಾರಾವಾಹಿ.

Share This Article