ದಮ್ಮಾಮ್‍ನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕರುನಾಡ ಸಂಭ್ರಮ

Public TV
3 Min Read

ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್, ಕರ್ನಾಟಕ ಘಟಕದ ಪ್ರಯುಕ್ತ ಇತ್ತೀಚೆಗೆ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ರಫಾ ಕ್ಲಿನಿಕ್ ಆಡಿಟೊರಿಯಂನಲ್ಲಿ ಆಯೋಜಿಸಲಾಗಿತ್ತು. ನಾಡಗೀತೆಯೊಂದಿಗೆ ಪ್ರಾರಂಭಗೊಂಡು ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನೊಳಗೊಂಡು ವಿನೂತನ ಶೈಲಿಯಲ್ಲಿ ಸಭೆಯು ಆಯೋಜನೆಗೊಂಡಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ರೌದ ಆಸ್ಪತ್ರೆ ಇಲ್ಲಿನ ಮೌಖಿಕ ಹಾಗೂ ಮ್ಯಾಕ್ಸೈಲೋಫೇಸಿಯಲ್ ಶಸ್ತ್ರಚಿಕಿತ್ಸಕ ಡಾ.ಅಭಿಜಿತ್ ವರ್ಗೀಸ್, “ಹೊರ ನಾಡಿನ ಜೀವನ ತಾಯ್ನಾಡಿನ ಬೆಲೆಯೇನೆಂಬುದನ್ನು ನಮಗೆ ತೋರಿಸಿಕೊಟ್ಟಿದೆ. ತಾಯ್ನೆಲದ ಸ್ಮರಣೆಗೆ ಅವಕಾಶವುಂಟು ಮಾಡಿದ ಈ ಕಾರ್ಯಕ್ರಮವನ್ನು ಆಯೋಜಿಸಿದ ಐ.ಎಸ್.ಎಫ್ ಪ್ರಯತ್ನ ಶ್ಲಾಘನೀಯ. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಐ.ಎಸ್.ಎಫ್ ಸ್ವಯಂಸೇವಕರ ಜೊತೆಗೆ ತಾನು ನಿಲ್ಲಲಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಕನ್ನಡ ರಾಜ್ಯೋತ್ಸವ ಸಂದೇಶ ಭಾಷಣ ನೀಡಿದ ದಮ್ಮಾಮ್ ಐ.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಎ.ಎಂ.ಆರಿಫ್ ಜೋಕಟ್ಟೆ ಮಾತನಾಡುತ್ತಾ, 2,000 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಯು 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಲಭಿಸಿ ಕೊಟ್ಟ ಅತ್ಯಂತ ಹಳೆಯ ಭಾಷೆಯಾಗಿದ್ದು ಹಲವು ತರಹದ ನಾಡಭಾಷೆಗಳ, ನಡೆ ನುಡಿಗಳ, ಜಲ ಸಮೃದ್ಧಿಯ, ಮೌಲ್ಯ, ಸಂಸ್ಕೃತಿಗಳ ರಸಬೀಡು. ಇಂದು ದುರಾದೃಷ್ಟವಶಾತ್ ನಮ್ಮ ಒಕ್ಕೂಟ ಸರಕಾರ ಕನ್ನಡ ಮನಸ್ಸುಗಳನ್ನು ಒಡೆಯುವ ಮುಖಾಂತರ, ಅಂದರೆ ರಾಷ್ಟ್ರೀಯ ಭಾಷೆ ಹಿಂದಿಯನ್ನು ಹೇರುವ ಮುಖಾಂತರ ಕನ್ನಡ ಭಾಷೆಗೆ ತೊಡಕಾಗುವ ಕೆಲಸ ಮಾಡುತ್ತಿದೆ.

ಹೊಸ ಶಿಕ್ಷಣ ನೀತಿಯ ಪೋಶಾಕಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕಡಿವಾಣ ಹಾಕುವ ಹುನ್ನಾರವನ್ನೂ ಕೂಡಾ ಒಕ್ಕೂಟ ಸರ್ಕಾರ ಪ್ರಯತ್ನ ಮಾಡುತ್ತಿದೆ. ಇದಲ್ಲದೆ ಐಟಿ. ಬಿಟಿ ಭರಾಟೆಯಲ್ಲಿ, ಬೃಹತ್ ಉದ್ದಿಮೆಗಳಲ್ಲಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಹಲವಾರು ಉದ್ಯೋಗ ವ್ಯವಸ್ಥೆಗಳಿದ್ದರೂ, ಸ್ಥಳೀಯರಿಗೆ ಉದ್ಯೋಗಾವಕಶ ನೀಡಬೇಕು ಎಂಬ ನಿಯಮವಿದ್ದರೂ ಅದನ್ನು ನೀಡದೆ ಅಕ್ರಮವೆಸಗುತ್ತಿರುವುದು ಕನ್ನಡ ನಾಡಿಗೆ ಮಾಡುವ ದ್ರೋಹವಾಗಿದೆ. ಇದೀಗ ಸ್ವಲ್ಪ ಮುಂದಕ್ಕೆ ಹೋಗಿ, ಕನ್ನಡ ಮಣ್ಣಿಗೆ ಕಿಂಚಿತ್ತೂ ಕೊಡುಗೆಗಳಿಲ್ಲದ ಪರಕೀಯರ ಹೆಸರನ್ನು ಕರುನಾಡ ಮಣ್ಣಿಗೆ ಇಡಲು ಹೊರಟಿರುವುದು ವಿಪರ್ಯಾಸ ಎಂದರು.

ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಜಾತಿ ಮತ ಪಂಗಡಗಳನ್ನು ತೊರೆದು ನಾಡ ಭಾಷೆ, ಜಲ, ಸಂಸ್ಕೃತಿ, ನಾಡುನುಡಿಗಾಗಿ ನಮ್ಮ ಪೂರ್ವಿಕರ ಹಾದಿ ಅನುಸರಿ ಮತ್ತೊಮ್ಮೆ ಹೋರಾಟ, ಚಳವಳಿಗಳನ್ನು ಮಾಡಬೇಕಾದ ಅನಿವಾರ್ಯತೆಯನ್ನೂ ಈ ಸಂಧರ್ಭದಲ್ಲಿ ಒತ್ತಿ ಹೇಳಿದರು.

ಉಪಾಧ್ಯಕ್ಷರಾದ ಎಂ. ಶರೀಫ್ ಅಡ್ಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. 3000ಕ್ಕೂ ಹೆಚ್ಚು ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದ ದಮ್ಮಾಮ್ ನ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೃದಯ ಶಸ್ತ್ರಚಿಕಿತ್ಸಕ ಡಾ.ಫಯಾಝ್ ರನ್ನು ಅವರ ಉದಾರ ಮನಸ್ಸು ಹಾಗೂ ಸಮಾಜ ಸೇವೆಯನ್ನು ಮನಗಂಡು ಅವರನ್ನು ಸನ್ಮಾನಿಸಲಾಯಿತು. ಐ.ಎಸ್.ಎಫ್ ದಮ್ಮಾಮ್ ಕರ್ನಾಟಕ ರಾಜ್ಯಾಧ್ಯಕ್ಷ ಮೆಹ್ರಾಜ್ ಗುಲ್ಬರ್ಗಾ ರವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ರಾಜ್ಯ ಸಮಿತಿ ಸದಸ್ಯರಾದ ಇಮ್ರಾನ್ ಕಾಟಿಪಳ್ಳ ಐ.ಎಸ್.ಎಫ್ ಸೌದಿ ಅರೇಬಿಯಾದಾದ್ಯಂತ ವಿವಿಧ ಕನ್ನಡಿಗ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವ ಕುರಿತು ವರದಿಯಿಟ್ಟರು. ಈ ಕುರಿತ ವಿಡಿಯೊ ಚಿತ್ರವನ್ನು ಪ್ರದರ್ಶಿಸಲಾಯಿತು. ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕನ್ನಡಿಗರಾದ ಜವಾಝ್ ಬಸ್ರೂರು ರಿಯಾದ್, ಲತೀಫ್ ಉಪ್ಪಿನಂಗಡಿ ಜೆದ್ದ, ಮುಹಮ್ಮದ್ ಯಾಸೀನ್ ಗುಲ್ಬರ್ಗಾ ಅಲ್ ಖೋಬರ್ ರವರನ್ನು ಸನ್ಮಾನಿಸಿದ ಕುರಿತು ಉಲ್ಲೇಖಿಸಿದರು.

ಸಮಾರಂಭದ ಅಂಗವಾಗಿ ನಡೆದ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ಅಭಿಮಾನಿಗಳ ಮನ ಗೆದ್ದಿತು. ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ, ಕರುನಾಡ ದಂತಕಥೆಗಳ ಅಲಂಕಾರಿಕ ಉಡುಗೆಗಳ ವೇಷಭೂಷಣ ಹಾಗೂ ಕನ್ನಡ ಡಿಂಡಿಮದ ಕಲರವ ಹಾಡು ನೆರೆದವರ ಹಾಗೂ ಅಂತರ್ಜಾಲ ವೀಕ್ಷಕರ ಮನಗೆದ್ದಿತು.

ಅಕ್ಟೋಬರ್ ತಿಂಗಳಲ್ಲಿ ನಡೆಸಿದ್ದ ಗಾಂಧಿ ಜಯಂತಿ ಅಂಗವಾಗಿ ‘ಗಾಂಧಿಯಿಂದ ಗೋಡ್ಸೆಯೆಡೆಗೆ ವಾಲುತ್ತಿರುವ ಭಾರತ’ ಎಂಬ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರ ಹೆಸರುಗಳನ್ನು ಪ್ರಕಟಿಸಲಾಯಿತು. 43 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು ಶಬೀರ್ ರಹಿಮಾನ್, ದ್ವಿತೀಯ ಸ್ಥಾನವನ್ನು ಫಾತಿಮಾ ರಲಿಯಾ ಮತ್ತು ತೃತೀಯ ಸ್ಥಾನವನ್ನು ಫಾತಿಮಾ ನುಸೈಬಾ ಹಾಗೂ ಸಮೀನಾ ಅಲ್‍ಖೋಬರ್ ಗೆದ್ದುಕೊಂಡರು.

ಇಂಡಿಯಾ ಫ್ರಟೆರ್ನಿಟಿ ಫೋರಂ ದಮ್ಮಾಮ್, ಕರ್ನಾಟಕ ರಾಜ್ಯಾಧ್ಯಕ್ಷ ಸಾಜಿದ್ ವಳವೂರು, ಐ.ಎಸ್.ಎಫ್ ಕೇಂದ್ರ ಸಮಿತಿ ಸದಸ್ಯ ಸಲಾವುದ್ದೀನ್ ತುಮಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೈಸೂರು ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ಸಯ್ಯದ್ ಅಮೀನ್, ಶಿವಮೊಗ್ಗ ಚಾರಿಟೇಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ನಯಾಝ್ ಅಹ್ಮದ್ ಮತ್ತು ಬೆಳಗಾಂ ಅಸೋಸಿಯೇಷನ್ ನ ಅಮ್ಜದ್ ಮುಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐ.ಎಸ್.ಎಫ್ ರಾಜ್ಯ ಸಮಿತಿ ಕಾರ್ಯದರ್ಶಿ ಶರೀಫ್ ಕೃಷ್ಣಾಪುರ ಧನ್ಯವಾದ ಸಲ್ಲಿಸಿದರು ಮತ್ತು ಐ.ಎಸ್.ಎಫ್ ಖೋಬರ್ ಉತ್ತರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮುನೀರ್ ಮೈಸೂರು ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *