ತೆಲುಗು, ತಮಿಳು, ಮರಾಠಿಗರ ಮಧ್ಯೆ ಕನ್ನಡಿಗ ಅನಾಥ – ಅಣಕು ಪ್ರದರ್ಶನದ ಮೂಲಕ ಬಂದ್‍ಗೆ ಬೆಂಬಲ

Public TV
1 Min Read

ದಾವಣಗೆರೆ: ರಾಜ್ಯದಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದು, ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮಾತ್ರ ವಿನೂತನವಾಗಿ ಪ್ರತಿಭಟನೆ ಮಾಡುವುದರ ಮೂಲಕ ರಾಜ್ಯ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ರಾಜಕೀಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಯದೇವ ಸರ್ಕಲ್‍ನಲ್ಲಿ ಕನ್ನಡ ಪರ ಸಂಘಟನೆಯ ಹೋರಾಟಗಾರರು ಜಮಾಯಿಸಿದ್ದರು. ವಿನೂತನವಾಗಿ ಪ್ರತಿಭಟನೆ ಮಾಡುವುದರ ಮೂಲಕ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ, ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ಓದಗಿಸುವಂತೆ ಒತ್ತಾಯಿಸಿದರು. ಕಾರ್ಯಕರ್ತರಿಗೆ ತೆಲುಗು, ತಮಿಳು, ಮರಾಠಿಗ ಎಂದು ಬರೆದಿರುಬ ನಾಮ ಫಲಕಗಳನ್ನು ಹಾಕಿ ಕನ್ನಡಿಗ ಅನಾಥನಾಗಿರುವಂತೆ ಬಿಂಬಿಸುವ ಅಣಕು ಪ್ರದರ್ಶನವನ್ನು ಮಾಡಿದರು. ಕನ್ನಡಿಗರು ಪರ ಭಾಷಿಗರ ಬಳಿ ಕೆಲಸಕ್ಕಾಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಿದರು.

ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಭಾವ ಚಿತ್ರ ಹಿಡಿದು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು. ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದ ಪ್ರತಿಭಟನಾಕಾರರು, ಜಯದೇವ ಸರ್ಕಲ್‍ನಿಂದ ಎಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿ ಉಪವಿಭಾಗಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸಿಎಂ ಅವರಿಗೆ ತಲುಪಿಸುವಂತೆ ಮನವಿ ಮಾಡಿದರು.

ದಾವಣಗೆರೆಯಲ್ಲಿ ಬಂದ್‍ಗೆ ಹೆಚ್ಚು ಬೆಂಬಲ ಸಿಗದಿದ್ದರೂ ಸಾರಿಗೆ ಸಂಚಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಎಸ್ಆರ್‌ಟಿಸಿ ಬಸ್ಸುಗಳು ಖಾಲಿ ಖಾಲಿಯಾಗಿದ್ದು, ಪ್ರಯಾಣಿಕರಿಲ್ಲದೆ ಖಾಲಿ ಬಸ್ಸುಗಳನ್ನು ಸಿಬ್ಬಂದಿ ಚಲಾಯಿಸುತ್ತಿದ್ದಾರೆ. ವ್ಯಾಪಾರ ವಹಿವಾಟು ಹಾಗೂ ಶಾಲಾ ಕಾಲೇಜುಗಳು ತೆರೆದಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದೆ ಯಥಾಸ್ಥಿತಿ ಕೆಲಸ ಕಾರ್ಯಗಳನ್ನು ನಡೆಯುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *