`ರಂಗಸಮುದ್ರ’ ಸಿನಿಮಾ (RangaSamudra) ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹೊಯ್ಸಳ ಫಿಲ್ಮ್ಸ್ (Hoysala Films) ಸಂಸ್ಥೆ ಈಗ ಹೊಸ ಚಿತ್ರ ಘೋಷಿಸಿದೆ. ಈ ಬಾರಿ ಹೊಯ್ಸಳ ಫಿಲ್ಮ್ಸ್ ಹೊಸಬರಿಗೆ ವೇದಿಕೆ ಕಲ್ಪಿಸಿದೆ. ಈ ನಿರ್ಮಾಣ ಸಂಸ್ಥೆಯ ಮತ್ತೊಂದು ಸಿನಿಮಾ ಬಾರ್ಡರ್ ಡೈರೀಸ್. ದೀಪಾವಳಿ ಹಬ್ಬದ ವಿಶೇಷವಾಗಿ ಇಂದು ಬಾರ್ಡರ್ ಡೈರೀಸ್ (Border Diaries) ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಗದ್ದಲ್ಲದ ಊರಿನಲ್ಲಿ ಸದ್ದಿಲ್ಲದೆ ಅರಳಿದ ಪ್ರೇಮಕಥೆಯನ್ನು ಯುವ ನಿರ್ದೇಶಕ ಎಎಸ್‌ಜಿ ಹೇಳೋದಿಕ್ಕೆ ಹೊರಟಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ.
ಕಳೆದ 7-8 ವರ್ಷಗಳಿಂದ ಸಾಹೇಬ, ನನ್ನ ಪ್ರಕಾರ, ತೂತು ಮಡಿಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಎ ಎಸ್ ಜಿ ಈಗ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಅವರ ಮೊದಲ ಪ್ರಯತ್ನಕ್ಕೆ ಬಾರ್ಡರ್ ಡೈರೀಸ್ ಎಂಬ ಟೈಟಲ್ ಇಟ್ಟಿದ್ದಾರೆ.
ಬಾರ್ಡರ್ ಡೈರೀಸ್ ಸಿನಿಮಾದಲ್ಲಿ ಯುವ ನಟ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಅಶ್ವಿತ ಹೆಗಡೆ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ತಬಲ ನಾಣಿ, ಶರತ್ ಲೋಹಿತಾಶ್ವ, ಮೇಘ ಜಾದವ್, ವೀಣಾ ಸುಂದರ್, ಆನಂದ್ ನೀನಾಸಂ ಕಾಳಿಪ್ರಸಾದ್, ಕುಶಾಲ್ ಬಿಕೆ, ನಾಗರಾಜ ಶಿವ ಸಿಂಪಿ ಇದ್ದಾರೆ.
ಚಿತ್ರಕ್ಕೆ ಚಮಕ್, ಸಖತ್ ಖ್ಯಾತಿಯ ಜುಡಾ ಸ್ಯಾಂಡಿ ಸಂಗೀತ ನೀಡಿದ್ದು, ಅಚ್ಯುತ್ ಬಿ ಎಸ್ ಅವರ ಛಾಯಾಗ್ರಹಣ ಮತ್ತು ಆಕಾಶ್ ಹಿರೇಮಠ ಅವರ ಸಂಕಲನವಿದೆ. ಚಿತ್ರದ ಚಿತ್ರೀಕರಣ ಕರ್ನಾಟಕ ಮತ್ತು ತಮಿಳುನಾಡು ಬಾರ್ಡರಿನಲ್ಲಿರುವ ಹೊಸೂರಿನ ಕೈಗಾರಿಕ ಪ್ರದೇಶ, ಚನ್ನಪಟ್ಟಣ, ಮಾಗಡಿ ಮತ್ತು ಬೆಂಗಳೂರಿನ ಸುತ್ತಮುತ್ತ ನಡೆದಿದೆ. ಸದ್ಯ ಬಾರ್ಡರ್ ಡೈರೀಸ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ತಯಾರಿಯ ಜೊತೆಗೆ ಪೋಸ್ಟ್ ಪ್ರೊಡಕ್ಷನ್ನಿನಲ್ಲಿ ಚಿತ್ರತಂಡ ತೊಡಗಿಕೊಂಡಿದೆ.