ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗೆ ರಂಗನಾಯಕಿ ಎಂಟ್ರಿ!

Public TV
2 Min Read

ಬೆಂಗಳೂರು: ನಮ್ಮ ನಡುವೆಯೇ ನಡೆಯೋ ವಿದ್ಯಮಾನಗಳನ್ನು ಎಲ್ಲ ಮಾಮೂಲಿಯೆಂಬ ಯಾಂತ್ರಿಕ ತಿರುಗಣಿಗೆಸೆದು ಮರೆತು ಬಿಡುವ, ಕಡೆಗಣಿಸುವವರೇ ಹೆಚ್ಚು. ಅಂಥಾ ಸೂಕ್ಷ್ಮ ವಿಚಾರಗಳನ್ನೇ ಸಿನಿಮಾವಾಗಿಸಿ ಮತ್ತೆ ನಮ್ಮದೇ ಮನಸಿಗೆ ನಾಟುವಂತೆ ಮಾಡೋದಿದೆಯಲ್ಲಾ? ಅದು ನಿಜವಾದ ಕಸುಬುದಾರಿಕೆ. ಅದರಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಪಳಗಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಅಮೋಘವಾದ ಗೆಲುವನ್ನೂ ಕಂಡಿದ್ದಾರೆ. ಹೀಗೆ ಸಲೀಸಾಗಿ ಯಾರೂ ಸೋಕಲಾರದ ಕಥೆಗಳ ಒಳಗೆ ಪಾತಾಳಗರಡಿ ಹಾಕಿ ದೃಶ್ಯ ಕಟ್ಟುವ ಕಲೆಗಾರಿಕೆಯಿಂದಲೇ ಅವರು ರಂಗನಾಯಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗೋದರ ಜೊತೆಗೇ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯಂಥಾ ಮತ್ತೊಂದು ವಿಚಾರವೂ ಹೊರಬಿದ್ದಿದೆ!

ಎಸ್.ವಿ ನಾರಾಯಣ್ ನಿರ್ಮಾಣ ಮಾಡಿರೋ ರಂಗನಾಯಕಿ ನವೆಂಬರ್ ಒಂದರಂದು ತೆರೆಗಾಣಲಿದೆ. ಅದಾಗಲೇ ಈ ಚಿತ್ರ ಈ ವರ್ಷದ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಿಂದ ಆಯ್ಕೆಯಾಗಿದೆ. ಇದಕ್ಕೆ ಆಯ್ಕೆಯಾದ ಈ ವರ್ಷದ ಏಕೈಕ ಕನ್ನಡ ಚಿತ್ರವೆಂಬ ಗರಿಮೆಯೂ ರಂಗನಾಯಕಿಯ ಮುಡಿಗೇರಿಕೊಂಡಿದೆ. ಈ ಬಗ್ಗೆ ಇಡೀ ಚಿತ್ರತಂಡವೇ ಸಂಭ್ರಮದಲ್ಲಿದೆ. ಅಂದಹಾಗೆ ಇದರ ಕಥಾ ಹಂದರದ ಸ್ವರೂಪವೇ ಇಂಥಾದ್ದೊಂದು ದಾಖಲೆಗೆ ದಾರಿ ಮಾಡಿ ಕೊಟ್ಟಿದೆ. ಇದುವೇ ರಂಗನಾಯಕಿಯ ಗೆಲುವಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ.

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇದು ಅತ್ಯಾಚಾರಕ್ಕೀಡಾದ ಹೆಣ್ಣುಮಗಳೊಬ್ಬಳ ಮನದ ಮರ್ಮರದ ಆಂತರ್ಯ ಹೊಂದಿರೋ ಕಥೆ. ನಮ್ಮೆಲ್ಲರ ಅರಿವಿಗೆ ಬಂದು ಸಾವಿರ ಸುದ್ದಿಗಳ ನಡುವೆ ಸದ್ದಿಲ್ಲದ ಸರಕಾಗಿ ಕಳೆದು ಹೋಗುವ ಅತ್ಯಾಚಾರದಂಥಾ ಕೃತ್ಯ ಅದನ್ನನುಭವಿಸಿದ ಜೀವದ ಪಾಲಿಗೆ ನಿತ್ಯ ನರಕ. ಅಂಥಾದ್ದನ್ನು ಅನುಭವಿಸುತ್ತಲೇ ಈ ಸಮಾಜವನ್ನು ಹೆಣ್ಣೊಬ್ಬಳು ಎದುರಿಸೋ ಬಗೆ ಈ ಸಿನಿಮಾದ ಒಂದೆಳೆ. ಆದರೆ ಇಡೀ ಚಿತ್ರ ಈ ಒಂದೆಳೆಯಷ್ಟು ಸರಳವಾದುದಲ್ಲ. ದಯಾಳ್ ಪದ್ಮನಾಭನ್ ಯಾವುದೇ ಕಥೆಯೇ ಆದರೂ ಇಂಚಿಂಚು ಸೂಕ್ಷ್ಮ ಅಂಶಗಳನ್ನೂ ಹೆಕ್ಕಿಕೊಂಡು ದೃಶ್ಯ ಕಟ್ಟುವ ಛಾತಿ ಹೊಂದಿರುವವರು. ಅವರು ರಂಗನಾಯಕಿಯನ್ನೂ ಕೂಡಾ ಅಷ್ಟೇ ಆಸ್ಥೆಯಿಂದ ಪೊರೆದಿದ್ದಾರೆ.

ಇಂಥಾ ಸೂಕ್ಷ್ಮವಾದ, ಸಮಾಜಕ್ಕೆ ಸಂದೇಶ ರವಾನಿಸೋ ಕಥೆಗೆ ಕಮರ್ಶಿಯಲ್ ಚೌಕಟ್ಟು ಹಾಕೋದು ನಿರ್ದೇಶನದ ದೃಷ್ಟಿಯಿಂದ ಸವಾಲಿನ ಕೆಲಸ. ಅದನ್ನು ದಯಾಳ್ ಪದ್ಮನಾಭನ್ ಸ್ವೀಕರಿಸಿದ್ದಾರೆ. ಆದರೆ ಅದು ಸಾಧ್ಯವಾದದ್ದು, ಪರಿಣಾಮಕಾರಿಯಾಗಿರೋದು ಎಸ್.ವಿ ನಾರಾಯಣ್ ಅವರಂಥಾ ಕಲಾಭಿರುಚಿಯ ನಿರ್ಮಾಪಕರ ಕಾರಣದಿಂದ. ಈ ಹಿಂದೆ ಎಟಿಎಂ ಎಂಬ ಸಿನಿಮಾ ನಿರ್ಮಾಣ ಮಾಡೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಾರಾಯಣ್ ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿರುವವರು. ತಾವು ನಿರ್ಮಾಣ ಮಾಡೋ ಚಿತ್ರಗಳ ಸಂಖ್ಯೆಗಿಂತ ಗುಣಮಟ್ಟವೇ ಮುಖ್ಯ ಎಂಬ ಮನೋಭಾವ ಹೊಂದಿರೋ ನಾರಾಯಣ್ ಆ ಪ್ರೀತಿಯಿಂದಲೇ ರಂಗನಾಯಕಿಗೆ ಸಾಥ್ ಕೊಟ್ಟಿದ್ದಾರೆ. ಆ ಬಲದಿಂದಲೇ ಈ ಚಿತ್ರವಿಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗೋ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಎತ್ತಿ ಹಿಡಿದಿದೆ.

Share This Article
Leave a Comment

Leave a Reply

Your email address will not be published. Required fields are marked *