ದಸರಾಗೆ ‘ರಂಗನಾಯಕ’ನ ಟೀಸರ್ ಉಡುಗೊರೆ!

Public TV
1 Min Read

ಬೆಂಗಳೂರು: ಕೆಲದಿನಗಳ ಹಿಂದಷ್ಟೇ ನವರಸ ನಾಯಕ ಜಗ್ಗೇಶ್ ಮತ್ತು ಮಠ ಗುರುಪ್ರಸಾದ್ ಕಾಂಬಿನೇಷನ್ನಿನಲ್ಲೊಂದು ಸಿನಿಮಾ ಬರುವ ಸುಳಿವು ಸಿಕ್ಕಿತ್ತು. ಇಬ್ಬರೂ ಸಹ ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್ನಿನ ಚಿತ್ರಕ್ಕೆ ಬಿರುಸಿನಿಂದ ತಯಾರಿ ಆರಂಭವಾಗಿದೆ. ಇದಕ್ಕೆ ‘ರಂಗನಾಯಕ’ ಎಂಬ ಟೈಟಲ್ ಕೂಡಾ ಫಿಕ್ಸಾಗಿದೆ. ಇದೇ ಹೊತ್ತಿನಲ್ಲಿ ಜಗ್ಗೇಶ್, ದಸರಾಗೆ ರಂಗನಾಯಕನ ಟೀಸರ್ ಉಡುಗೊರೆ ಕೊಡುವ ವಿಚಾರವನ್ನೂ ಕೂಡಾ ಸೋಶಿಯಲ್ ಮೀಡಿಯಾ ಮೂಲಕವೇ ಹೇಳಿಕೊಂಡಿದ್ದಾರೆ.

ಗುರು ರಾಘವೇಂದ್ರ ಸ್ವಾಮಿಯ ಪರಮ ಭಕ್ತರಾಗಿರುವ ಜಗ್ಗೇಶ್ ರಾಯರ ಬೃಂದಾವನದ ಮುಂದೆಯೇ ಈ ಚಿತ್ರಕ್ಕೆ ಆಶೀರ್ವಾದ ಪಡೆಯೋ ಮೂಲಕ ಶುಭಾರಂಭ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆಗೇ ಜೋರಾಗಿಯೇ ತಯಾರಿ ನಡೆಸುತ್ತಿರೋ ಜಗ್ಗೇಶ್ ಮತ್ತು ಗುರು ಇದೇ ತಿಂಗಳ 8ನೇ ತಾರೀಕಿನಂದು ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ. ಸಂಜೆ 7 ಗಂಟೆಗೆ ಸರಿಯಾಗಿ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ರಂಗನಾಯಕನ ಟೀಸರ್ ಬಿಡುಗಡೆಯಾಗಲಿದೆ.

ಇದು ಅಖಂಡ ಹತ್ತು ವರ್ಷಗಳ ನಂತರದ ಪುನರ್ಮಿಲನ. ಮಠ ಮತ್ತು ಎದ್ದೇಳು ಮಂಜುನಾಥದಂಥಾ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು ಗುರುಪ್ರಸಾದ್ ಮತ್ತು ಜಗ್ಗೇಶ್ ಜೋಡಿ. ಈ ಎರಡು ಚಿತ್ರಗಳು ಅದೆಂಥಾ ಕ್ರೇಜ್ ಸೃಷ್ಟಿಸಿದ್ದವೆಂದರೆ, ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮತ್ತೊಂದು ಚಿತ್ರಕ್ಕಾಗಿ ಪ್ರೇಕ್ಷಕರೇ ಬೇಡಿಕೆ ಇಡಲಾರಂಭಿಸಿದ್ದರು. ಆದರೆ ಈ ಎರಡು ಚಿತ್ರಗಳ ನಂತರದಲ್ಲಿ ಗುರು ಮತ್ತು ಜಗ್ಗಣ್ಣನ ನಡುವೆ ವೈಮನಸ್ಯ ಹೊಗೆಯಾಡಿತ್ತೆಂಬ ರೂಮರುಗಳೂ ತೇಲಿ ಬರುತ್ತಾ ಹತ್ತು ವರ್ಷಗಳ ಕಾಲ ಇಬ್ಬರೂ ದೂರಾಗಿದ್ದರು. ಇದೀಗ ರಂಗನಾಯಕ ಮೂಲಕ ಅವರು ಮತ್ತೆ ಒಂದಾಗಿರೋದೇ ಪ್ರೇಕ್ಷಕರಲ್ಲಿ ಖುಷಿ ಮೂಡಿಸಿದೆ.

ರಂಗನಾಯಕ ಮೂಲಕ ಈ ಜೋಡಿ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಡುವ ಎಲ್ಲ ಲಕ್ಷಣಗಳೂ ಆರಂಭಿಕವಾಗಿಯೇ ಕಾಣಿಸಲಾರಂಭಿಸಿದೆ. ಅಂದಹಾಗೆ ಇದು ಸಂಪೂರ್ಣವಾಗಿ ಮನೋರಂಜನಾತ್ಮಕ ಚಿತ್ರ. ಗುರು ಮತ್ತು ಜಗ್ಗೇಶ್ ಜೊತೆಯಾಗುತ್ತಾರೆಂದರೆ ಹೊಟ್ಟೆ ಹುಣ್ಣಾಗುವಂತೆ ನಗಿಸೋ ನಿರೀಕ್ಷೆ ಎಲ್ಲರಲ್ಲಿಯೂ ಮೂಡಿಕೊಳ್ಳುತ್ತೆ. ಅದಕ್ಕೆ ತಕ್ಕುದಾದ ಕಥೆಯನ್ನೇ ಗುರುಪ್ರಸಾದ್ ಕೂಡಾ ಹೊಸೆದಿದ್ದಾರಂತೆ. ಅದರ ಗುಣ ಲಕ್ಷಣಗಳು ಟೀಸರ್ ಮೂಲಕ ಜಾಹೀರಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *