ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

Public TV
1 Min Read

ಬೆಂಗಳೂರು: ಅಪ್ಪಟ ಕನ್ನಡದ, ಕೇಳಿದಾಕ್ಷಣವೇ ಆಪ್ತವೆನ್ನಿಸುವ ಶೀರ್ಷಿಕೆಯ ಚಿತ್ರಗಳು ಆಗಾಗ ಗಮನ ಸೆಳೆಯುತ್ತಿರುತ್ತವೆ. ಇದೀಗ ಬಿಡುಗಡೆಗೆ ರೆಡಿಯಾಗಿರುವ ರಾಜ್ ಗೋಪಿ ನಿರ್ದೇಶನದ ಪಯಣಿಗರು ಕೂಡಾ ಅದೇ ಸಾಲಿನಲ್ಲಿ ಸೇರ್ಪಡೆಯಾಗಬಲ್ಲ ಚಿತ್ರ. ಕೊಳನ್ ಕಲ್ ಮಹಾಗಣಪತಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಪಯಣಿಗರು ಇದೇ ಏಪ್ರಿಲ್ ಹದಿನೇಳನೇ ತಾರೀಕಿನಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ.

ಸಂಸಾರದ ಜವಾಬ್ದಾರಿ ಹೊತ್ತ ಐವರು ನಡುವಯಸಿನ ಸ್ನೇಹಿತರು ಗೋವಾ ಟ್ರಿಪ್ಪಿಗೆ ಹೋಗೋದು ಈ ಕಥೆಯ ಮೂಲ. ನೆಮ್ಮದಿ ಅರಸಿ ಹೊರಡುವ ಈ ಸ್ನೇಹಿತರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಸ್ವಭಾವ. ಆದರೆ ಅವರಿಗೆ ಬೆಂಗಳೂರಿನಿಂದ ಗೋವಾ ಪ್ರಯಾಣದಲ್ಲಿ ಅನಿರೀಕ್ಷಿತ ಘಟನಾವಳಿಗಳೇ ಪದೇ ಪದೇ ಎದುರಾಗುತ್ತವೆ. ಗೋವಾದಲ್ಲಿಯಂತೂ ಇರುವ ನೆಮ್ಮದಿಯನ್ನೂ ಕಿತ್ತುಕೊಳ್ಳುವಂಥಾ ಘಟನೆಯೊಂದು ನಡೆದು ಇಡೀ ಟೀಮು ಕಂಗಾಲಾಗುತ್ತೆ.

ಇಂಥಾ ಹೊತ್ತಲ್ಲಿಯೇ ಈ ಪಯಣದಲ್ಲಿ ಅನಿರೀಕ್ಷಿತವಾಗಿ ರಾಮಣ್ಣ ತಾತ ಎಂಬ ಹಿರಿಯ ಕ್ಯಾರೆಕ್ಟರ್ ಒಂದು ಈ ಟೀಮು ಸೇರಿಕೊಳ್ಳುತ್ತದೆಯಂತೆ. ಈ ರಾಮಣ್ಣ ತಾತನ ಪಾತ್ರವನ್ನು ಹಿರಿಯ ನಟ ನಾಗರಾಜ್ ರಾವ್ ನಿರ್ವಹಿಸಿದ್ದಾರಂತೆ. ಎಲ್ಲ ಪಾತ್ರಗಳಂತೆಯೇ ಈ ಪಾತ್ರವೂ ಕೂಡಾ ಎಲ್ಲರನ್ನು ಕಾಡುವಂತೆ ಮೂಡಿ ಬಂದಿದೆಯಂತೆ. ನಿಖರವಾಗಿ ಹೇಳ ಬೇಕೆಂದರೆ, ಪಯಣಿಗರ ಪಯಣ ಪಕ್ಕಾ ಬೇರೆಯದ್ದೇ ಜಾಡಿನದ್ದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಮತ್ತು ರವಿಚಂದ್ರ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *