ಮದ್ವೆ ನಂತರ ಸಿಂಧು ಲೋಕನಾಥ್ ಬಾಳಲ್ಲಿ ‘ಹೀಗೊಂದು ದಿನ’

Public TV
2 Min Read

ಬೆಂಗಳೂರು: ನಟಿ ಸಿಂಧು ಲೋಕನಾಥ್ ಮದುವೆಯ ನಂತರ ಬಣ್ಣದ ಲೋಕದಿಂದ ದೂರ ಉಳಿದ್ರಾ ಎಂಬ ಪ್ರಶ್ನೆಯೊಂದು ಎಲ್ಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿತ್ತು. ಆದ್ರೆ ಅವರ ಮದುವೆ ಮುಂಚೆಯೇ ಸೆಟ್ಟೇರಿದ್ದ ‘ಹೀಗೊಂದು ದಿನ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

‘ಲವ್ ಇನ್ ಮಂಡ್ಯ’ ಚಿತ್ರದ ಬಳಿಕ ನಾಪತ್ತೆಯಾಗಿದ್ದ ಸಿಂಧು ಕೆಲ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಸದ್ದಿಲ್ಲದೇ ಮಂಗಳೂರು ಮೂಲದ ಶ್ರೇಯಸ್ ಕೊಡಿಯಾಲ್ ಅವರೊಂದಿಗೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ವಿಭಿನ್ನ ಕಥಾ ಹಂದರವುಳ್ಳ ‘ಹೀಗೊಂದು ದಿನ’ ಚಿತ್ರದಲ್ಲಿ ಹೊಸ ಕಲಾವಿದರೊಂದಿಗೆ ಸಿಂಧು ಲೋಕನಾಥ್ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ವಿಕ್ರಮ್ ಯೋಗಾನಂದ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ರೆ, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ.

ಎರಡು ಗಂಟೆಯಲ್ಲಿ ನಡೆಯುವ ಕಥೆಯನ್ನು ಹೀಗೊಂದು ದಿನ ಚಿತ್ರ ಒಳಗೊಂಡಿದೆ. ಒಂದು ಗುರಿ ಇಟ್ಟುಕೊಂಡು ಮನೆಯಿಂದ ಯುವತಿ ಹೊರ ನಡೆಯುತ್ತಾಳೆ. ಈ ವೇಳೆ ಕಥಾ ನಾಯಕಿ ತನ್ನ ಗುರಿ ತಲುಪಲು ಎರಡು ಗಂಟೆಯಲ್ಲಿ ಯಾವ ತೊಂದರೆಗಳನ್ನು, ಕಷ್ಟಗಳನ್ನು ಎದುರಿಸ್ತಾಳೆ ಎಂಬುವುದು ಕಥೆಯ ತಿರುಳು. ಕಥೆಯಲ್ಲಿ ನಾಯಕಿಯ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗಿನ ಸನ್ನಿವೇಶವನ್ನು ಹೊಂದಿದೆ. ಹೀಗಾಗಿ ಚಿತ್ರೀಕರಣವನ್ನು ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯ ಮಧ್ಯ ಭಾಗದಲ್ಲಿ ಶೂಟ್ ಮಾಡಲಾಗಿದೆ.

Heegondhu Dina | Kannada Movie | Sindhu Loknath | Vikram Yoganand

ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿಯ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್, ಮಿತ್ರ, ಗಿರಿ, ಬಾಲಾಜಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಲಾಶ್ ಗುಪ್ತ ಸಂಗೀತ ನೀಡಿದ್ದಾರೆ.

ಈಗಾಗಲೇ ಚಿತ್ರದ ಟ್ರೇಲರ್ ಹಿಟ್ ಆಗಿದ್ದು, ಮನೆ ಬಿಟ್ಟು ಹೊರಡುವ ಯುವತಿ ಮುಂದೆ ಏನು ಮಾಡ್ತಾಳೆ? ಎಂಬ ಸಸ್ಪೆನ್ಸ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿದೆ. ಪ್ರಯೋಗಾತ್ಮಕ ಸಿನಿಮಾ ಇದಾಗಿದ್ದು, ಆನ್‍ಕಟ್ ಫಿಲ್ಮ್ ಎಂಬುವುದು ಚಿತ್ರತಂಡದ ಹೆಮ್ಮೆ. ಸಿನಿಮಾ ಇದೇ ತಿಂಗಳು 9ರಂದು ರಿಲೀಸ್ ಆಗಲಿದೆ.

Share This Article
Leave a Comment

Leave a Reply

Your email address will not be published. Required fields are marked *