ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

Public TV
2 Min Read

ಬೆಂಗಳೂರು: ನಿರ್ದೇಶಕಿ ರೂಪಾ ರಾವ್ ಖಂಡಿತಾ ಒಂದು ಮ್ಯಾಜಿಕ್ ಮಾಡುತ್ತಾರೆ. ಹೀಗಂತ ಗಂಟುಮೂಟೆ ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಅಂದುಕೊಂಡಿದ್ದರು. ಹದಿಹರೆಯದ ಹತ್ತತ್ತಿರ ಸಾಗುತ್ತಿರೋ ಮನಸುಗಳ ಕಥೆಯ ಸುಳಿವಿನೊಂದಿಗೆ ಈ ಚಿತ್ರದ ಟ್ರೈಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಇದೀಗ ಗಂಟುಮೂಟೆ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಅದರೊಳಗೆ ಕಾಣಿಸಿದ ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ ಕಂಡು ಪ್ರತೀ ಪ್ರೇಕ್ಷಕರು ಮುದಗೊಂಡಿದ್ದಾರೆ.

ಈಗಾಗಲೇ ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ರೂಪಾ ರಾವ್ ಅದನ್ನೆಲ್ಲ ಒಟ್ಟುಗೂಡಿಸಿಕೊಂಡು ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಲೋಕವನ್ನೇ ಈ ಮೂಲಕ ತೆರೆದಿಟ್ಟಿದ್ದಾರೆ. ಯಾವುದೇ ಕಥೆಗಳಾದರೂ ಹುಡುಗನ ಕಣ್ಣೋಟದಿಂದಲೇ ಬಿಚ್ಚಿಕೊಳ್ಳುತ್ತದೆ. ಆತನ ಮನೋಭೂಮಿಕೆಯ ಇಷಾರೆಯ ಮೇರೆಗೇ ಕಥೆ ಕದಲುತ್ತದೆ. ಆದರೆ ಈ ಚಿತ್ರದಲ್ಲಿ ಕಥೆ ಬಿಚ್ಚಿಕೊಳ್ಳೋದೇ ನಾಯಕಿ ಮೀರಾಳ ದೃಷ್ಟಿಯಲ್ಲಿ. ಇದರಾಚೆಗೆ ಚದುರಿಕೊಳ್ಳುವ ಕಥೆ ಹಲವು ದಿಕ್ಕುಗಳಲ್ಲಿ ವಿಸ್ತಾರಗೊಳ್ಳುತ್ತಾ ತಾಜಾ ಅನುಭವವನ್ನು ಪ್ರೇಕ್ಷಕರ ಎದೆ ತುಂಬುವಷ್ಟು ಇಲ್ಲಿನ ದೃಶ್ಯಗಳು ಶಕ್ತವಾಗಿವೆ.

ಮೀರಾ ಎಂಬುದು ಈ ಚಿತ್ರದ ಕೇಂದ್ರ ಬಿಂದುವಿನಂಥಾ ಪಾತ್ರ. ಇದು ಬೆಂಗಳೂರಿನ ಮಧ್ಯಮ ವರ್ಗದ ಭೂಮಿಕೆಯಲ್ಲಿ ಜರುಗೋ ಕಥೆ. ಕಥಾ ನಾಯಕಿ ಮೀರಾ ಹೈಸ್ಕೂಲ್ ಹುಡುಗಿ. ಮೃದು ಮಧುರ ಸ್ವಭಾವದ ಮೀರಾಗೆ ಸಿನಿಮಾ ಗುಂಗು. ಆಕೆ ಹಿಂದಿ ಸಿನಿಮಾವೊಂದನ್ನು ನೋಡಿ ಸಲ್ಮಾನ್ ಖಾನ್ ಅಭಿಮಾನಿಯಾಗಿ ಬಿಟ್ಟಿರುತ್ತಾಳೆ. ಅದು ಎಷ್ಟರ ಮಟ್ಟಿಗೆಂದರೆ ತನ್ನ ಬದುಕಿನ ಪಲ್ಲಟಗಳನ್ನೂ ಕೂಡಾ ಆ ಚಿತ್ರದ ದೃಶ್ಯಗಳೇ ಎಂಬಷ್ಟು ತೀವ್ರವಾಗಿ ಫೀಲ್ ಮಾಡಿಕೊಳ್ಳುವಷ್ಟು. ಅಂಥಾ ಹುಡುಗಿಯಲ್ಲಿ ಹೈಸ್ಕೂಲು ತಲುಪುತ್ತಲೇ ಪ್ರೇಮದ ಭಾವಗಳು ಚಿಗುರಿಕೊಳ್ಳುತ್ತವೆ. ಅದರಲ್ಲಿಯೂ ಕೂಡಾ ಸಲ್ಮಾನ್ ಖಾನ್ ಚಿತ್ರದ ಚಹರೆಗಳಿರುತ್ತವೆ.

ತನ್ನನ್ನು ಪ್ರೇಮಿಸೋ ಹುಡುಗ ಕೂಡಾ ಸಲ್ಮಾನ್ ಖಾನನಂತಿರಬೇಕೆಂಬುದು ಆಕೆಯ ಬಯಕೆ. ಈ ದೆಸೆಯಲ್ಲಿ ಮೀರಾ ಹುಡುಕಾಡಿ ಕಡೆಗೂ ತನ್ನದೇ ಕ್ಲಾಸ್ ರೂಮಿನ ಮಧು ಎಂಬ ಹುಡುಗನಲ್ಲಿ ಸಲ್ಮಾನ್ ಚಹರೆಗಳನ್ನು ಕಂಡುಕೊಳ್ಳುತ್ತಾಳೆ. ಆ ನಂತರ ಪ್ರೇಮ ಮೂಡಿಕೊಂಡು ಕಥೆಯ ಓಘ ತೀವ್ರವಾಗುತ್ತದೆ. ಆ ಮೇಲೇನಾಗುತ್ತದೆ ಅನ್ನೋದಕ್ಕೆ ರೂಪಾ ರಾವ್ ಅತ್ಯಂತ ಚುರುಕಾದ ಅಪರೂಪದ ಉತ್ತರವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಭಾವ ತೀವ್ರತೆ ಇದೆ. ಹರೆಯದ ಕೀಟಲೆ, ಭೋಳೇತನ, ರೋಮಾಂಚಕ ಅಂಶಗಳು ಸೇರಿದಂತೆ ಎಲ್ಲವೂ ಇವೆ.

ಮೀರಾ ಪಾತ್ರಧಾರಿ ತೇಜು ಬೆಳವಾಡಿ ಪಾಲಿಗಿದು ಮೊದಲ ಅನುಭವ. ಆದರೆ ಆಕೆ ಪಳಗಿದ ನಟಿಯಂತೆ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಜೋಡಿಯಾಗಿ ಮಧು ಎಂಬ ಪಾತ್ರದಲ್ಲಿ ನಟಿಸಿರೋ ನಿಶ್ಚಿತ್ ಕೊರೋಡಿ ಕೂಡಾ ಚೆಂದಗೆ ನಟಿಸಿದ್ದಾರೆ. ರೂಪಾರಾವ್ ಈ ಮೂಲಕವೇ ತಾನು ಭಿನ್ನ ನೋಟದ ನಿರ್ದೇಶಕಿ ಎಂಬುದನ್ನು ಸಾಬೀತು ಪಡಿಸುತ್ತಲೇ ನಿರ್ದೇಶಕಿಯಾಗಿ ನೆಲೆಗೊಳ್ಳುವ ಭರವಸೆ ಮೂಡಿಸಿದ್ದಾರೆ. ಅಷ್ಟು ತೀವ್ರತೆಯಿಂದ ಅವರಿಲ್ಲಿ ತೊಂಭತ್ತರ ದಶಕದ ಪ್ರೇಮಕಾವ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದೊಳ್ಳೆ ಚಿತ್ರ ನೋಡಿದ ಅನುಭವಕ್ಕಾಗಿ ಖಂಡಿತಾ ಗಂಟುಮೂಟೆಯನ್ನೊಮ್ಮೆ ಎಲ್ಲರೂ ನೋಡಬಹುದು.

ರೇಟಿಂಗ್-4/5

Share This Article
Leave a Comment

Leave a Reply

Your email address will not be published. Required fields are marked *