ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಚಲನಚಿತ್ರಗಳ ಶೀರ್ಷಿಕೆಗಳೇ ವಿಶೇಷವಾಗಿರುತ್ತವೆ. ಆಕರ್ಷಕವೂ ಆಗಿರುತ್ತದೆ. ಅಂತಹ ಮತ್ತೊಂದು ಚಿತ್ರವೇ ‘ಗಂಡುಲಿ’. ವಿನಯ್ ರತ್ನಸಿದ್ಧಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಆರ್.ಟಿ.ನಗರದ ಶ್ರೀವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ಪಕ್ಕಾ ಹಳ್ಳಿಯ ಸೊಗಡಿನ ಕಥಾ ಹಂದರ ಹೊಂದಿರುವ ಈ ಚಿತ್ರದ ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸುತ್ತಿದ್ದಾರೆ. ವಿನಯ್ ರತ್ನಸಿದ್ಧಿ ಈ ಹಿಂದೆ ಇಂಜಿನಿಯರ್ಸ್ ಹಾಗೂ ಕಿಲಾಡಿಗಳು ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಗಂಡುಲಿ ಇವರ ಮೂರನೇ ಚಿತ್ರವಾಗಿದೆ. ಇದೇ ಮೊದಲ ಬಾರಿಗೆ ಗ್ರಾಮೀಣ ಕಥಾ ಹಂದರವನ್ನು ಕೈಗೆತ್ತಿಕೊಂಡಿರುವ ವಿನಯ್ ಈ ಚಿತ್ರಕ್ಕೆ ತುಮಕೂರು, ಕೆ.ಆರ್.ಪೇಟೆ, ಚಾಮರಾಜನಗರ ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ.
ಮುಹೂರ್ತದ ನಂತರ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ ವಿಜಯರ್ ರತ್ನಸಿದ್ಧಿ ಗಂಡುಲಿ ಎನ್ನುವುದು ನಾಯಕನ ನಿಕ್ ನೇಮ್ ಗ್ರಾಮೀಣ ಪ್ರದೇಶಗಳಲ್ಲಿ ಧೈರ್ಯವಂತ, ಸಾಹಸಿ ಯುವಕರನ್ನು ಗಂಡುಲಿ (ಗಂಡು ಹುಲಿ) ಎಂದು ಕರೆಯುವುದು ರೂಢಿಯಲ್ಲಿದೆ. ಅದನ್ನೇ ಚಿತ್ರದ ಶೀರ್ಷಿಕೆಯಾಗಿ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರದ ಕಥೆ ಕೂಡ ಅಂತ ಒಬ್ಬ ಯುವಕನ ಮೇಲೆ ನಡೆಯುತ್ತದೆ. ಒಬ್ಬ ಹುಡುಗ ತನ್ನ ಹಳ್ಳಿಯನ್ನು ಹೇಗೆಲ್ಲ ಏಳಿಗೆ ಮಾಡಬಹುದು, ಅಲ್ಲದೇ ಹಳ್ಳಿಯನ್ನು ಹೇಗೆಲ್ಲ ಹಾಳು ಮಾಡಬಹುದು ಎಂಬುದನ್ನು ಚಿತ್ರದಲ್ಲಿ ನಾಯಕನ ಪಾತ್ರದ ಮೂಲಕ ತೋರಿಸಿದ್ದೇವೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಇಡೀ ಚಿತ್ರದ ಕಥೆ ಹಳ್ಳಿ ಬ್ಯಾಕ್ ಡ್ರಾಪ್‍ನಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ನಂತರ ನಾಯಕಿ ಛಾಯಾದೇವಿ ಮಾತನಾಡಿ ಸಿಟಿಯಿಂದ ಹಳ್ಳಿಗೆ ಡಾಕ್ಟರ್ ಆಗಿ ಬರುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ತನ್ನ ಪಾತ್ರದ ಬಗ್ಗೆ ಹೇಳಿದರು. ಈ ಹಿಂದೆ ಎ.ಟಿ.ಎಂ. ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದ ರವಿದೇವ್ ಈ ಚಿತ್ರದ 4 ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಆಗಸ್ಟ್ ಅಂತ್ಯದ ವೇಳೆಗೆ ಚಿತ್ರೀಕರಣ ಮುಗಿಸಿ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಬೇಕೆಂಬ ಯೋಜನೆಯನ್ನು ಚಿತ್ರದ ನಿರ್ದೇಶಕ ವಿನಯ್ ರತ್ನಸಿದ್ಧಿ ಹಾಕಿಕೊಂಡಿದ್ದಾರೆ. ಧರ್ಮೇಂದ್ರ ಅರಸ್, ಸುಧಾ ಬೆಳವಾಡಿ, ಗೌತಮ್, ವಿಜಯ್, ಪ್ರಜ್ವಲ್, ಶಿವು ಹಾಗೂ ಸಂತೋಷ್ ಉಳಿದ ತಾರಾಬಳಗದಲ್ಲಿ ನಟಿಸುತ್ತಿದ್ದಾರೆ.