ಈ ವಾರ ಗ್ರಾಮೀಣ ಸೊಗಡಿನ ಡೇಸ್ ಆಫ್ ಬೋರಾಪುರ

Public TV
2 Min Read

ಬೆಂಗಳೂರು: ಅಪ್ಪಟ ಗ್ರಾಮೀಣ ಕಥಾಹಂದರ ಹೊಂದಿರುವ ಡೇಸ್ ಆಫ್ ಬೋರಾಪುರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ಮೊನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆಲ್ಲ ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ತುಂಬಾ ಸುಭಿಕ್ಷವಾಗಿದ್ದ ಒಂದು ಕುಗ್ರಾಮದಲ್ಲಿ ಹೊಸ ವಸ್ತುವೊಂದು ಬಂದಾಗ ಅಲ್ಲಿನ ಜನರಲ್ಲಿ ಏನೇನೆಲ್ಲ ಬದಲಾವಣೆಗಳಾದವು ಎಂಬ ವಿಷಯವನ್ನು ಇಟ್ಟುಕೊಂಡು ಮಾಡಿದಂಥ ಕಥಾನಕವಿದು.

ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಲಾನಿರ್ದೇಶಕ ದಿನೇಶ್ ಮಂಗಳೂರು ಬೆಟ್ಟೇಗೌಡ ಎಂಬ ಪಾತ್ರವನ್ನು ಮಾಡಿದ್ದರೆ, ಅವರ ಪುತ್ರ ಸೂರ್ಯ ಸಿದ್ದಾರ್ಥ ನಾಯಕನಾಗಿ ನಟಿಸಿದ್ದಾರೆ. ಪ್ರಶಾಂತ್ ಸಿ.ಎಂ., ಅನಿತಾ ಭಟ್, ಪ್ರಕೃತಿ ಮತ್ತು ಅಮಿತಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ 35 ದಿನಗಳ ಕಾಲ ಇಡೀ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ.

ನಾಯಕ ಸೂರ್ಯ ಮಾತನಾಡಿ ಇದೊಂದು ಸಸ್ಪೆನ್ಸ್, ಥ್ರಿಲರ್, ಕಾಮಿಡಿ ಸಿನಿಮಾ. 10 ದಿನಗಳ ಹಿಂದಷ್ಟೇ ಬಿಟ್ಟಿದ್ದ ಟ್ರೈಲರ್‍ಗೆ ಅದ್ಭುತ ರೆಸ್ಪಾನ್ಸ್ ಸಿಕ್ತು. ಈ ಚಿತ್ರದಲ್ಲಿ ನನ್ನದು ಒಬ್ಬ ಹಳ್ಳಿ ಹುಡುಗನ ಪಾತ್ರ. ಸುಮಾರು ಷೇಡ್ಸ್ ಈ ಪಾತ್ರದಲ್ಲಿದೆ. ಈ ಹಿಂದೆ ನಾನು ಮಾಡಿದ್ದ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದೆ ಎಂದು ಹೇಳಿದರು. ಮತ್ತೊಬ್ಬ ನಾಯಕ ಪ್ರಶಾಂತ್ ಮಾತನಾಡುತ್ತ ನಾನೊಬ್ಬ ಭಗ್ನ ಪ್ರೇಮಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇಡೀ ಸಿನಿಮಾದಲ್ಲಿ ನಾಯಕಿಯನ್ನು ಟಚ್ ಮಾಡುವುದಿಲ್ಲ. ಚಿತ್ರದ ಡೈಲಾಗ್ ಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಇಡೀ ಸಿನಿಮಾ ಅರ್ಥವಾಗುತ್ತದೆ ಎಂದು ಹೇಳಿದರು.

ನಾಯಕಿಯಾದ ಅಮಿತಾ ರಂಗನಾಥ್ ಮಾತನಾಡಿ, ಭಾಗ್ಯ ಎಂಬ ಹಳ್ಳಿಯ ವಿದ್ಯಾವಂತೆ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಮೆಚೂರ್ಡ್ ಹೆಣ್ಣಿನ ಪಾತ್ರ. ನಾನು ಮಾಡುವ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು. ಮತ್ತೊಬ್ಬ ನಟಿ ಅನಿತಾ ಭಟ್ ಮಾತನಾಡಿ, ಒಬ್ಬ ಡ್ರಾಮಾ ಆರ್ಟಿಸ್ಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಪ್ರಕೃತಿ, ನನ್ನಲ್ಲಿನ ಟ್ಯಾಲೆಂಟನ್ನು ತೋರಿಸುವಂಥ ಅವಕಾಶ ಈ ಚಿತ್ರದಲ್ಲಿ ಸಿಕ್ಕಿತು. ಲಕ್ಷ್ಮಿ ಎಂಬ ಇನ್ನೋಸೆಂಟ್ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಒಂದು ಹಾಡನ್ನು ಹಾಡಿದ್ದಾರೆ. ನಟ ಶಿವರಾಜ ಕುಮಾರ್ ಅಭಿಮಾನಿಗಳಾದ ಮಧು ಬಸವರಾಜ ಹಾಗೂ ಅಜಿತ್ ಕುಮಾರ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಎನ್.ಆದಿತ್ಯ ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮನು ಮಂಡ್ಯ ಈ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿ ಸಹನಿರ್ದೇಶನ ಮಾಡಿದ್ದಾರೆ. ಹೈದರಾಬಾದ್ ಮೂಲದ ನಟ ಶಫಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ರಘು ಪಾಂಡೇಶ್ವರ, ಮಹದೇವ ಲಾಲಿಪಾಳ್ಯ ಉಳಿದ ಪಾತ್ರಗಳಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *