ಊರಲ್ಲಿ ಒಳ್ಳೆಯವ್ರು ಎಷ್ಟೇ ಜನರಿದ್ರೂ, ಕೆಟ್ಟವನು ಮಾತ್ರ ಒಬ್ಬನಿರಬೇಕು-ಗಂಧದಗುಡಿಯ ಮತ್ತೊಂದು ಕಥೆ

Public TV
1 Min Read

ಬೆಂಗಳೂರು: ಚಂದನವನದಲ್ಲಿ ಮತ್ತೊಮ್ಮೆ ಗಂಧದ ಗುಡಿಯ ಕಥೆಯನ್ನು ತೆಗೆದುಕೊಂಡು ವಿಭಿನ್ನ ಸಿನಿಮಾ ತೆರೆಮೇಲೆ ಅಬ್ಬರಿಸಲು ರೆಡಿಯಾಗುತ್ತಿದೆ. ಈಗಾಗಲೇ ಗಂಧದ ಗುಡಿಯ ಎರಡು ಸಿನಿಮಾಗಳು ಅಚ್ಚಳಿಯದೇ ಉಳಿದುಕೊಂಡಿವೆ. ಅದೇ ರೀತಿಯ ಕಥೆಯನ್ನು ಹೋಲುವ ‘ಚೂರಿ ಕಟ್ಟೆ’ ಚಿತ್ರದ ಟ್ರೇಲರ್, ಹಾಡುಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

ಸಿನಿಮಾದಲ್ಲಿ ಗುಂಡುಗಳ ಸದ್ದು ಸಿಕ್ಕಾಪಟ್ಟೆ ಕೇಳಿಬಂದಿದ್ದು, ಖಡಕ್ ಡೈಲಾಗ್ ಗಳನ್ನು ಹೊಂದಿದೆ. ಊರಲ್ಲಿ ಒಳ್ಳೆಯವ್ರು ಎಷ್ಟೇ ಜನರಿದ್ರೂ, ಕೆಟ್ಟವನು ಮಾತ್ರ ಒಬ್ಬನಿರಬೇಕು ಎಂಬ ಡೈಲಾಗ್ ಚಿತ್ರದ ರೋಚಕತೆಯನ್ನು ಹೇಳುತ್ತದೆ. ಚೌಕಾಬಾರ ಎಂಬ ವಿಭಿನ್ನ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ರಘು ಶಿವಮೊಗ್ಗ ‘ಚೂರಿಕಟ್ಟೆ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಬಳಿಯ ಚೂರಿಕಟ್ಟೆ ಎಂಬ ಅರಣ್ಯ ವಲಯದಲ್ಲಿ ಚಿತ್ರೀಕರಣ ನಡೆದಿದೆ. ಚೂರಿಕಟ್ಟೆ ಟಿಂಬರ್ ಮಾಫಿಯಾ (ಬೆಲೆ ಬಾಳುವ ಮರಗಳ ಕಳ್ಳ ಸಾಗಾಣಿಕೆ) ಕಥೆಯನ್ನು ಹೊಂದಿದ್ದು, ನೋಡುಗರನ್ನು ಮಾಫಿಯಾದ ಕಗ್ಗತ್ತಲಿನಲ್ಲಿ ಭಯಬೀಳಸಲಿದೆ. ಅರಣ್ಯ ಪ್ರದೇಶದಲ್ಲಿಯ ಬೆಲೆ ಬಾಳುವ ಮರಗಳನ್ನು ಕಡಿದು ಅಕ್ರಮ ಸಾಗಾಟಕ್ಕೆ ಸಂಬಂಧಿಸಿದ ವಿಭಿನ್ನ, ರೋಚಕ ಕಥೆಯನ್ನು ಟ್ರೇಲರ್ ಹೇಳುತ್ತದೆ.

ಈಗಾಗಲೇ ಚೂರಿಕಟ್ಟೆ ತನ್ನ ಟೀಸರ್, ಟ್ರೇಲರ್ ಮತ್ತು ಲಿರಿಕಲ್ ವಿಡಿಯೋ ಹಾಡುಗಳಿಂದ ಚಂದನವನದಲ್ಲಿ ಭರವಸೆಯನ್ನು ಮೂಡಿಸಿದೆ. ರಘು ಶಿವಮೊಗ್ಗ ನಿರ್ದೇಶಕರಾದ ಬಿ.ಸುರೇಶ್ ಮತ್ತು ಪ್ರಕಾಶ್ ಬೆಳವಾಡಿ ಅವರ ಗರಡಿಯಲ್ಲಿ ಪಳಗಿದವರು. `ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ’ ಖ್ಯಾತಿಯ ಪ್ರವೀಣ್ ಚೂರಿಕಟ್ಟೆಯ ಕಥಾ ನಾಯಕ. ಪ್ರವೀಣ್‍ಗೆ ನಾಯಕಿಯಾಗಿ ಪ್ರೇರಣಾ ಎಂಬ ಹೊಸ ನಟಿ ಸ್ಯಾಂಡಲ್‍ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಚೂರಿಕಟ್ಟೆ ಮಾರ್ನಿಂಗ್ ಸ್ಟಾರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಎಸ್ ನಾಯಜ್ ಮತ್ತು ಎಂ.ತುಳಸೀರಾಮುಡು ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ವಾಸುಕಿ ವೈಭವ್ ಚೂರಿಕಟ್ಟೆಗೆ ಸಂಗೀತ ನೀಡಿದ್ದು, ಈಗಾಗಲೇ ಹಾಡುಗಳು ಪ್ರೇಕ್ಷಕರ ಸೆಳೆಯುವಲ್ಲಿ ಯಶಸ್ವಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *