ರೋಚಕ ಕಥೆಯ ಮೂಲಕ ರೆಟ್ರೋ ಲೋಕ ತೋರಿಸೋ ಬೆಲ್ ಬಾಟಮ್!

Public TV
2 Min Read

ಬೆಂಗಳೂರು: ಎಂಭತ್ತರ ದಶಕದ ಆಚೀಚಿನ ಕಾಲಮಾನದಲ್ಲಿ ಪತ್ತೇದಾರಿ ಸಿನಿಮಾಗಳ ಜಮಾನ ಜೋರಾಗಿತ್ತು. ಆ ಬಳಿಕ ಥರ ಥರದ ಪ್ರಯೋಗಗಳ ಮೂಲಕ ಹೊಸಾ ದಿಕ್ಕಿಗೆ ಹೊರಳಿಕೊಂಡ ಪರಿಣಾಮ ಪತ್ತೇದಾರಿ ಪ್ರಾಕಾರದ ಸಿನಿಮಾಗಳಿಗೆ ವಿರಾಮ ಸಿಕ್ಕಂತಾಗಿತ್ತು. ಆದರೀಗ ಅದೆಷ್ಟೋ ದಶಕದ ನಂತರ ಬೆಲ್ ಬಾಟಮ್ ಚಿತ್ರದ ಮೂಲಕ ಪತ್ತೇದಾರಿಕೆಯ ಮಜಾ ಮತ್ತೆ ಸಿಕ್ಕಿದೆ. ಈ ಸಿನಿಮಾ ಪ್ರೇಕ್ಷಕರನ್ನೆಲ್ಲ ಎಂಭತ್ತರ ದಶಕಕ್ಕೆ ಕರೆದೊಯ್ದು ಬೇರೆಯದ್ದೇ ಅನುಭವ ತುಂಬಿ ಕಳಿಸುವಷ್ಟರ ಮಟ್ಟಿಗೆ ಶಕ್ತವಾಗಿದೆ.

ಇದು ಕೋಲಾರ ಸೀಮೆಯಲ್ಲಿ ನಡೆದಿದ್ದ ನೈಜ ಕಥೆಯೊಂದರ ಸ್ಫೂರ್ತಿಯಿಂದ ರೂಪುಗೊಂಡಿರೋ ಚಿತ್ರ. ದಯಾನಂದ್ ಬರೆದಿರೋ ಹೊಸತನ ಹೊಂದಿರುವ ಈ ಕಥೆಗೆ ನಿರ್ದೇಶಕ ಜಯತೀರ್ಥ ಅವರೇ ಚಿತ್ರಕಥೆ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಇದೂ ಸೇರಿದಂತೆ ಪಾತ್ರವರ್ಗ, ಪಾತ್ರಗಳ ವಿಲಕ್ಷಣ ಹೆಸರುಗಳೆಲ್ಲವೂ ಹೊಸತನದ ಜೊತೆಗೇ ಎಲ್ಲರನ್ನು ರೆಟ್ರೋ ಲೋಕದಲ್ಲಿ ವಿಹರಿಸಿಕೊಂಡು ಬರುವಂತೆ ಮಾಡುತ್ತವೆ.

ಆತ ದಿವಾಕರ. ಅಕ್ಷರ ಜ್ಞಾನ ಬರುತ್ತಲೇ ಪತ್ತೇದಾರಿ ಕಾದಂಬರಿಗಳನ್ನು ಓದೋ ಗೀಳಿಗೆ ಬಿದ್ದಿದ್ದ ಈತನಿಗೆ ಎಳವೆಯಿಂದಲೂ ಡಿಟೆಕ್ಟಿವ್ ಆಗಬೇಕೆನ್ನೋ ಕನಸು. ಆದರೆ ಅಪ್ಪನ ಒತ್ತಾಸೆಗೆ ಬಿದ್ದು ದಿವಾಕರ ಪೊಲೀಸ್ ಕಾನ್ ಸ್ಟೇಬಲ್ ಆಗಿ ವೃತ್ತಿ ಆರಂಭಿಸುತ್ತಾನೆ. ಹೀಗೆ ಖಾಕಿ ತೊಟ್ಟರೂ ಕೂಡಾ ಈತನೊಳಗಿನ ಪತ್ತೇದಾರಿಕೆಯ ಪ್ರೀತಿ ಮಾತ್ರ ಬತ್ತಿರೋದಿಲ್ಲ. ಹೀಗಿರುವಾಗಲೇ ಪೊಲೀಸ್ ಠಾಣೆಗಳಲ್ಲೇ ಕಳವು ಮಾಡೋ ಖತಾರ್ನಾಕ್ ಕಳ್ಳರು ಹುಟ್ಟಿಕೊಂಡು ಬಿಡುತ್ತಾರೆ., ದಿನ ಬೆಳಗಾದರೆ ಪೊಲೀಸ್ ಠಾಣೆಗಳಲ್ಲಿಯೇ ಕಳ್ಳತನ ನಡೆಯೋ ನಗೆಪಾಟಲಿನ ವಿಚಾರ ಸಾಲು ಸಾಲಾಗಿ ನಡೆಯುತ್ತಿರುತ್ತವೆ. ಇದನ್ನು ದಿವಾಕರ ತನ್ನ ಪತ್ತೇದಾರಿ ಕೈಚಳಕದಿಂದ ಹೇಗೆ ಭೇದಿಸುತ್ತಾನೆ? ಅಷ್ಟಕ್ಕೂ ಪೊಲೀಸ್ ಠಾಣೆಯಲ್ಲಿಯೇ ಕಳ್ಳತನ ಮಾಡುತ್ತಿದ್ದ ಖದೀಮ ರು ಯಾರು ಅಂತೆಲ್ಲ ಕುತೂಹಲಕ್ಕೆ ಥೇಟರಿನಲ್ಲಿ ಮಜವಾದ ಉತ್ತರವಿದೆ.

ಈವರೆಗೂ ನಿರ್ದೇಶಕರಾಗಿ ಭಿನ್ನ ಕಥೆಗಳಿಂದ ಗಮನ ಸೆಳೆದಿದ್ದ ರಿಷಬ್ ಶೆಟ್ಟಿ ತಾನು ನಟನೆಗೂ ಸೈ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ನಾಯಕಿ ಹರಿಪ್ರಿಯಾ ಕಾಣಿಸಿಕೊಳ್ಳೋ ಸೀನುಗಳೆಲ್ಲವೂ ಪ್ರೇಕ್ಷಕರ ಪಾಲಿಗೆ ಹಬ್ಬ. ರಿಷಬ್ ಮತ್ತು ಹರಿಪ್ರಿಯಾ ಅಷ್ಟೊಂದು ಚೆನ್ನಾಗಿ ನಟಿಸುತ್ತಲೇ ರೆಟ್ರೋ ಲುಕ್ಕಿನಲ್ಲಿ ಇಷ್ಟವಾಗುತ್ತಾರೆ. ಇನ್ನುಳಿದಂತೆ ಸೆಗಣಿ ಪಿಂಟೋ, ಮರಕುಟುಕ ಮುಂತಾದ ಈವರೆಗೆ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳದಿದ್ದ ವಿಲಕ್ಷಣ ಹೆಸರಿನ ಪಾತ್ರಗಳು ಈ ಸಿನಿಮಾದಲ್ಲಿ ಗಮನ ಸೆಳೆಯುತ್ತವೆ. ಮರಕುಟುಕನಾಗಿ ಯೋಗರಾಜ ಭಟ್, ಪ್ರಮೋದ್ ಶೆಟ್ಟಿ ಕೂಡಾ ಅದ್ಭುತವಾಗಿಯೇ ನಟಿಸಿದ್ದಾರೆ.

ನಿರ್ದೇಶಕ ಜಯತೀರ್ಥ ಚಿತ್ರಗಳೆಂದ ಮೇಲೆ ವಿಶೇಷತೆಗಳು ಇದ್ದೇ ಇರುತ್ತವೆ. ಈ ಚಿತ್ರದ ತುಂಬಾ ಅವರು ಹೊಸಾ ಸವಾಲಿಗೆ ಒಡ್ಡಿಕೊಳ್ಳುತ್ತಲೇ ಸ್ಪಷ್ಟವಾಗಿಯೇ ಗೆಲುವು ದಾಖಲಿಸಿದ್ದಾರೆ. ಒಟ್ಟಾರೆಯಾಗಿ ರೋಚಕ ಪತ್ತೇದಾರಿ ಕಥೆ, ಕಚಗುಳಿ ಇಡೋ ಹಾಸ್ಯ ಮತ್ತು ಇಂಚಿಂಚಾಗಿ ರೆಟ್ರೋ ಲೋಕದ ಒಳಗಿಳಿಸೋ ದೃಶ್ಯ ವೈಭವ. ನೀವೊಂದು ಸಲ ಈ ಚಿತ್ರವನ್ನ ನೋಡದಿದ್ದರೆ ವರ್ಣಿಸಲು ಸಾಧ್ಯವಿಲ್ಲದ ಅದ್ಭುತ ಅವಕಾಶ ವೊಂದನ್ನು ಕಳೆದುಕೊಳ್ಳುತ್ತೀರಿ!

ರೇಟಿಂಗ್- 4/5

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *