ಕತ್ತಲು ಕಷ್ಟವೆನಿಸಿದರೂ ‘6ನೇ ಮೈಲಿ’ಯಲ್ಲಿ ಅಚ್ಚರಿಯಿದೆ!

Public TV
1 Min Read

ಬೆಂಗಳೂರು: ವಿಶಿಷ್ಟವಾದ ಪಾತ್ರಗಳ ಮೂಲಕವೇ ಹೆಸರಾಗಿರುವ ಸಂಚಾರಿ ವಿಜಯ್ ನಟಿಸಿರೋ 6ನೇ ಮೈಲಿ ಚಿತ್ರ ತೆರೆ ಕಂಡಿದೆ. ಪಶ್ಚಿಮಘಟ್ಟಗಳೆಂದರೇನೇ ಹಲವಾರು ಕೌತುಕಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಪ್ರದೇಶ. ಈಗಂತೂ ನೈಸರ್ಗಿಕ ಆಹ್ಲಾದವನ್ನೇ ಮಂಕಾಗಿಸುವಂಥಾ ಮಾಫಿಯಾಗಳೂ ಅಲ್ಲಿ ರಾರಾಜಿಸುತ್ತಿವೆ. ಇಂಥಾ ಪ್ರದೇಶದ ಕಥೆ ಅಂದ ಮೇಲೆ ಕುತೂಹಲ ಹುಟ್ಟದಿರೋದಿಲ್ಲ. ಇಂಥಾ ನಿರೀಕ್ಷೆಯೊಂದಿಗೆ ಥಿಯೇಟರು ಹೊಕ್ಕವರನ್ನು ಅಲ್ಲಲ್ಲಿ ನಿರಾಸೆ ಮಾಡಿದರೂ ಚೆಂದದ್ದೊಂದು ಅನುಭವ ಕಟ್ಟಿ ಕೊಡುವಲ್ಲಿ ಈ ಚಿತ್ರ ತಕ್ಕಮಟ್ಟಿಗೆ ಗೆದ್ದಿದೆ!

ಉಜಿರೆ ವ್ಯಾಪ್ತಿಯ ದಟ್ಟವಾದ ಕಾಡಿನಲ್ಲಿಯೇ ಈ ಕಥಾನಕ ಬಿಚ್ಚಿಕೊಳ್ಳುತ್ತದೆ. ನೈಸರ್ಗಿಕ ಸೌಂದರ್ಯದ ಗಣಿಯಂತಿರೋ ಆ ಕಾಡಿನ ವಾತಾವರಣದಲ್ಲಿ ಬಹು ಕಾಲದಿಂದಲೂ ನಕ್ಸಲ್ ಚಟುವಟಿಕೆ ನಡೆದು ಬಂದಿರುತ್ತೆ. ಹಾಗಿದ್ದರೂ ಅದು ಚಾರಣಪ್ರಿಯರ ಹಾಟ್ ಸ್ಪಾಟ್ ಆಗಿಯೇ ಮುಂದುವರೆದಿರುತ್ತೆ. ಹೆಣ್ಣು ಗಂಡುಗಳ ಜೋಡಿ ಜೋಡಿ ಗುಂಪು ಚಾರಣದ ಹೆಸರಲ್ಲಿ ದಾಂಗುಡಿ ಇಡುವ ಪ್ರದೇಶದಲ್ಲಿ ಹಿಡಿದು ಸುಲಿಯುವ ದರೋಡೆಕೋರರು, ಅತ್ಯಾಚಾರಿಗಳೂ ಹುಟ್ಟಿಕೊಂಡಿರುತ್ತಾರೆ.

ಇಂಥಾ ಕ್ರಿಮಿನಲ್ ಚಟುವಟಿಕೆಗಳ ಹಿಂದಿರುವವರನ್ನು ಮಟ್ಟ ಹಾಕಲು ನೈಟ್ ಜರ್ನಿಯ ಬೇಟೆ ಶುರು ಮಾಡಿಕೊಳ್ಳುವ ತನಿಖಾ ತಂಡ ಕ್ರಿಮಿನಲ್ಲುಗಳನ್ನು ಕೆಡವಿಕೊಳ್ಳೋದರ ಸುತ್ತಲಿನ ಕಥೆಯನ್ನು ಆರನೇ ಮೈಲಿ ಹೊಂದಿದೆ. ಆದರೆ ಕತ್ತಲಲ್ಲಿಯೇ ಹೆಚ್ಚಿನ ದೃಶ್ಯಗಳನ್ನು ಕಟ್ಟಿರೋದರಿಂದ ಅಸಲೀ ರೋಚಕತೆಯೊಂದು ಮಬ್ಬು ಮಬ್ಬಾಗಿ, ಪೇಲವವಾಗಿ ಪ್ರೇಕ್ಷಕರನ್ನು ತಲುಪಿಕೊಂಡಿದೆ.

ಹೆಚ್ಚು ಎಳೆದಾಡಬಾರದೆಂಬ ಉದ್ದೇಶದಿಂದಲೇ ನಿರ್ದೇಶಕ ಸೀನಿ ಇಡೀ ಚಿತ್ರವನ್ನು ನೂರಾ ಇಪ್ಪತ್ತು ನಿಮಿಷಕ್ಕಿಳಿಸಿದ್ದಾರೆ. ಆದರೆ ಈ ಚಿತ್ರದ ನಿಜವಾದ ಕಂಟೆಂಟನ್ನು ಅರವತ್ತು ನಿಮಿಷದಲ್ಲಿಯೇ ಹೇಳುವಂಥಾದ್ದು. ಈ ಎಳೆದಾಟ ಮೊದಲಾರ್ಧದಲ್ಲಿ ಕೊಂಚ ಅಸಹನೆ ಹುಟ್ಟಿಸಿದರೂ ದ್ವಿತೀಯಾರ್ಧದಲ್ಲಿ ತುಂಬಾ ಚೇತೋಹಾರಿ ಅನುಭವ ನೀಡುವ ಮೂಲಕ ನಿರ್ದೇಶಕರು ಚಾಕಚಕ್ಯತೆ ತೋರಿಸಿದ್ದಾರೆ.

ಕೆಲವಾರು ಕೊರತೆಗಳಾಚೆಗೂ ಬರೀ ಬೋರು ಹೊಡೆಸದೆ ಚೇತೋಹಾರಿ ಅನುಭವ ನೀಡುವ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಎಂದಿನಂತೆ ಚೆಂದದ ನಟನೆ ನೀಡಿದ್ದಾರೆ. ಮಿಕ್ಕೆಲ್ಲ ಪಾತ್ರಗಳನ್ನೂ ಕೂಡಾ ನಿರ್ದೇಶಕ ಸೀನಿ ಕಥೆಗೆ ಬೇಕಾದಂತೆ ಪಳಗಿಸಿಕೊಂಡಿದ್ದಾರೆ. ಈ ಮೂಲಕವೇ ಅವರು ನಿರ್ದೇಶಕರಾಗಿ ಭರವಸೆ ಹುಟ್ಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *