ಹಾರರ್ ‘ಟ್ರಂಕ್’ ಸಿಕ್ಕಿದ್ದು ಕಲಬುರಗಿಯಲ್ಲಿ!

Public TV
1 Min Read

– ದೆವ್ವಗಳ ಮೇಲೆ ಸೈಂಟಿಫಿಕ್ ಕಣ್ಗಾವಲು!
– ರಿಷಿಕಾ ತಂದ ಟ್ರಂಕಿನೊಳಗೆ ಏನೇನಿದೆ ಗೊತ್ತಾ?

ಬೆಂಗಳೂರು: ಈಗ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಡೆ ರಿಶಿಕಾ ನಿರ್ದೇಶನದ ಟ್ರಂಕ್ ಚಿತ್ರದ್ದೇ ಮಾತು. ಹೀಗೆ ಟ್ರೇಲರ್ ಮೂಲಕ ಟಾಕ್ ಕ್ರಿಯೇಟ್ ಆಗುತ್ತಲೇ ಚಿತ್ರೀಕರಣದ ಸಂದರ್ಭದಲ್ಲಿ ಉಂಟಾದ ಪ್ರೇತಬಾಧೆಯ ವೀಡಿಯೋ ಒಂದು ಲೀಕ್ ಆಗೋ ಮೂಲಕ ಪ್ರೇಕ್ಷಕರು ಟ್ರಂಕಿನತ್ತ ಮತ್ತಷ್ಟು ಕುತೂಹಲಗೊಂಡಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕ ಜಿ.ವಿ ಅಯ್ಯರ್ ಮೊಮ್ಮಗಳು ರಿಶಿಕಾ ಶರ್ಮಾ ಈ ಮೂಲಕ ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರ ಸತ್ಯ ಘಟನೆಯೊಂದನ್ನು ಆಧರಿಸಿದ್ದೆಂಬುದು ಅಸಲೀ ವಿಶೇಷ. ಉತ್ತರಕರ್ನಾಟಕ ಸೀಮೆಯ ಗುಲ್ಬರ್ಗಾದಲ್ಲಿ (ಈಗಿನ ಕಲಬುರಗಿ) 1997ರ ಸುಮಾರಿಗೆ ನಡೆದಿದ್ದ, ಆ ಪ್ರದೇಶದಲ್ಲಿ ಈಗಲೂ ಚಾಲ್ತಿಯಲ್ಲಿರುವ ಪ್ರಕರಣವೊಂದನ್ನು ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಸಿದ್ಧಪಡಿಸಲಾಗಿದೆಯಂತೆ.

ಸಾಮಾನ್ಯವಾಗಿ ದೆವ್ವ ಭೂತಗಳ ಜಾಡನ್ನು ಮಂತ್ರ ತಂತ್ರದ ಮೂಲಕ ಬೆನ್ನು ಬೀಳೋದು ಕನ್ನಡ ಚಿತ್ರಗಳ ಮಟ್ಟಿಗೆ ಜನಪ್ರಿಯವಾಗಿರೋ ಸಿದ್ಧ ಮಾದರಿ. ಆದರೆ ಟ್ರಂಕ್ ಚಿತ್ರದಲ್ಲಿ ಇದಕ್ಕಾಗಿ ಪಕ್ಕಾ ಸೈಂಟಿಫಿಕ್ ಮೆಥಡನ್ನು ಅನುಸರಿಸಲಾಗಿದೆಯಂತೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ದೆವ್ವ ಭೂತಗಳನ್ನು ಘೋಸ್ಟ್ ಹಂಟರ್ ತಂಡದ ಮೂಲಕ ಪತ್ತೆಹಚ್ಚುವಂಥಾ ವಿಭಿನ್ನವಾದ ಮಾದರಿಯನ್ನು ಅನುಸರಿಸಲಾಗಿದೆಯಂತೆ. ಈ ಘೋಸ್ಟ್ ಹಂಟರ್ ಗಳು ಬೀಡಾಡಿಗಳಂತೆ ಅಲೆದಾಡೋ ದೆವ್ವಗಳನ್ನು ಪಳಗಿಸಿಕೊಂಡು ಅವುಗಳೊಂದಿಗೆ ಮಾತುಕತೆ ನಡೆಸುವಂಥಾ ಕಥಾನಕಗಳೂ ಇದ್ದಾವೆ. ಈ ಕ್ಷಣಕ್ಕೂ ವಿಜ್ಞಾನ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಂಡಿಲ್ಲವಾದರೂ ಸೈಂಟಿಫಿಕ್ ಮಾದರಿಯಲ್ಲಿ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಳ್ಳುವುದೂ ಒಂದು ವೈರುಧ್ಯ. ಆದರೆ ಆ ಹಾದಿ ಬಲು ರೋಚಕ!

ಅಂಥಾ ರೋಚಕತೆ ಟ್ರಂಕ್ ಚಿತ್ರದುದ್ದಕ್ಕೂ ಇದೆಯಂತೆ. ಹಾಡು, ಪ್ರೀತಿ ಮುಂತಾದವುಗಳತ್ತ ಹೆಚ್ಚಾಗಿ ಗಮನ ಹರಿಸದೆ, ಕಥೆಯ ಮೂಲಕವೇ ಕಾಮಿಡಿಯನ್ನೂ ಹರಿಯ ಬಿಟ್ಟು ಚಿತ್ರದುದ್ದಕ್ಕೂ ಹಾರರ್ ಅಂಶಗಳತ್ತಲೇ ಪ್ರಧಾನವಾಗಿ ಗಮನ ಹರಿಸಲಾಗಿದೆಯಂತೆ. ಅಂತೂ ರಿಷಿಕಾ ಸಾರಥ್ಯದ ಈ ಚಿತ್ರ ಮೊದಲ ಹಂತದಲ್ಲಿಯೇ ಭಾರೀ ಕ್ರೇಜ್ ಹುಟ್ಟು ಹಾಕಿರೋದಂತೂ ಸತ್ಯ!

Share This Article
Leave a Comment

Leave a Reply

Your email address will not be published. Required fields are marked *