ಈ ವಾರ ಬರಲಿದೆ ವಿಲನ್ ಟೀಸರ್!

Public TV
1 Min Read

– ಟೀಸರ್ ಬಿಡುಗಡೆ ಸಮಾರಂಭಕ್ಕೆ 500 ರೂ. ಟಿಕೆಟ್!

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸಿರೋ ಕಾರಣಕ್ಕೇ ಎಲ್ಲರ ಗಮನ ಸೆಳೆದಿದ್ದ ಚಿತ್ರ ದಿ ವಿಲನ್. ಆದರೆ ನಿರ್ದೇಶಕ ಪ್ರೇಮ್ ಅದೇಕೋ ಮಾಮೂಲಿನಂತೆ ಈ ಚಿತ್ರದ ಕೆಲಸ ಕಾರ್ಯಗಳನ್ನು ನಿಧಾನ ಮಾಡಿದ್ದರೂ ಆರಂಭಿಕ ಕ್ಯೂರಿಯಾಸಿಟಿಯನ್ನೇ ಕಾಯ್ದುಕೊಂಡಿರೋದು ಈ ಚಿತ್ರದ ವಿಶೇಷ!

ಯಾಕೆ ಇನ್ನೂ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ ಎಂಬಂಥಾ ಪ್ರಶ್ನೆಗಳ ಹೊರತಾಗಿ ಮತ್ಯಾವ ಸದ್ದೂ ಇರದಿದ್ದ ಈ ಚಿತ್ರದ ಕಡೆಯಿಂದ ಹೊಸಾ ಸುದ್ದಿಯೊಂದು ಹೊರ ಬಿದ್ದಿದೆ. ನಿರ್ದೇಶಕ ಪ್ರೇಮ್ ಅವರು ಇದೇ ತಿಂಗಳ 28ರಂದು ವಿಶೇಷವಾದೊಂದು ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಪೋಸ್ಟರ್‍ಗಳಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರುಗಳ ನ್ಯೂ ಲುಕ್ ಅಭಿಮಾನಗಳನ್ನು ಸೆಳೆದುಕೊಂಡಿತ್ತು. ತಡವಾದರೂ ಏನೋ ಕಮಾಲ್ ಮಾಡೋ ಪ್ರೇಮ್ ಈಗ ಬಿಡುಗಡೆಯಾಗಲಿರೋ ಟೀಸರ್‍ನಲ್ಲಿಯೂ ಹೊಸತೇನನ್ನೋ ಇಟ್ಟಿರುತ್ತಾರೆಂಬ ವಿಶ್ವಾಸ ಪ್ರೇಕ್ಷಕರಲ್ಲಿ ಇದ್ದೇ ಇದೆ. ಈ ಟೀಸರ್ ಬಿಡುಗಡೆಯ ವಿಚಾರದಲ್ಲಿಯೂ ಪ್ರೇಮ್ ವಿಶೇಷವಾದೊಂದು ವಿಚಾರ ಜಾಹೀರು ಮಾಡಿದ್ದಾರೆ. ಮೊದಲ ಸಲ ಟೀಸರ್ ಬಿಡುಗಡೆ ಸಮಾರಂಭಕ್ಕೆ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಅದರ ಬೆಲೆ 500 ರೂಪಾಯಿಯಂತೆ. ಚಿತ್ರ ನಿರ್ದೇಶಕರಲ್ಲಿ ಅನೇಕರು ಸಂಕಷ್ಟದಲ್ಲಿರುತ್ತಾರಾದ್ದರಿಂದ ಈ ಟಿಕೇಟಿನ ಕಾಸನ್ನು ಅಂಥವರ ಕಷ್ಟಗಳಿಗೆ ಸಹಾಯವಾಗುವಂತೆ ವಿನಿಯೋಗಿಸಲು ಪ್ರೇಮ್ ನಿರ್ಧರಿಸಿದ್ದಾರೆ. ಈ ಟೀಸರ್ ಅನಾವರಣ ಕಾರ್ಯಕ್ರಮ ಜೂ.28ರಂದು ಸಂಜೆ 7 ಘಂಟೆಗೆ ಮಾಗಡಿ ರಸ್ತೆಯ ಜಿಟಿ ವಲ್ರ್ಡ್ ಮಾಲ್‍ನಲ್ಲಿ ನಡೆಯಲಿದೆ.

ಇದೇ ಹೊತ್ತಿನಲ್ಲಿ ಬಾಕಿ ಉಳಿದಿರುವ ಚಿತ್ರೀಕರಣವನ್ನೂ ಕಂಪ್ಲೀಟು ಮಾಡಿಕೊಳ್ಳಲೂ ತಯಾರಿ ಆರಂಭಿಸಿದ್ದಾರಂತೆ. ಇದೇ ವೇಗದಲ್ಲಿ ಪ್ರೇಮ್ ಮುಂದುವರೆದರೆ ಇನ್ನು ಕೆಲ ದಿನಗಳಲ್ಲಿಯೇ ಈ ಚಿತ್ರ ತೆರೆ ಕಾಣುವ ದಿನಾಂಕವೂ ನಿಗದಿಯಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *