ರಣಹೇಡಿಯ ಒಡಲಲ್ಲಿದೆ ರೈತ ಕಥನ!

Public TV
1 Min Read

ಮರ್ಷಿಯಲ್ ಹಾದಿಯ ಸಿನಿಮಾಗಳ ಅಬ್ಬರದ ನಡುವೆಯೇ ಆಗಾಗ ನೆಲದ ಘಮಲಿನ ಸಿನಿಮಾಗಳೂ ಕೂಡಾ ತಯಾರಾಗುತ್ತಿರುತ್ತವೆ. ಇದರಲ್ಲಿನ ಕ್ರಿಯಾಶೀಲತೆ, ಹೊಸತನಗಳೇ ಗೆಲುವಿನ ಹಾದಿ ತೋರಿಸುತ್ತವೆ. ಕಂಟೆಂಟು ಗಟ್ಟಿಯಾಗಿದ್ದರೆ ಎಂಥಾ ದೊಡ್ಡ ಚಿತ್ರಗಳ ಎದುರಾದರೂ ಪೈಪೋಟಿ ಕೊಟ್ಟು ಗೆಲ್ಲೋ ಕಸುವನ್ನು ಈಗಾಗಲೇ ಕನ್ನಡದ ಪ್ರೇಕ್ಷಕರು ಕರುಣಿಸಿದ್ದಾರೆ. ಆ ಬಲದಿಂದಲೇ ಪ್ರಯೋಗಾತ್ಮಕವಾದ, ಹೊಸ ಜಾಡಿನ ಸಿನಿಮಾಗಳು ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ದಾಖಲಾಗುವಂತೆ ಮೂಡಿ ಬಂದಿರುವ ರಣಹೇಡಿ ಚಿತ್ರ ಇದೇ ತಿಂಗಳ 29ರಂದು ತೆರೆಗಾಣುತ್ತಿದೆ.

ಮನು ಕೆ ಶೆಟ್ಟಿಹಳ್ಳಿ ನಿರ್ದೆಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಸುರೇಶ್ ನಿರ್ಮಾಣ ಮಾಡಿದ್ದಾರೆ. ಕರ್ಣಕುಮಾರ್ ಮತ್ತು ಐಶ್ವರ್ಯಾ ರಾವ್ ಇದರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರುವವರು ಕರ್ಣ ಕುಮಾರ್. ಅವರು ರಣಹೇಡಿ ಮೂಲಕ ನಾಯಕ ನಟನಾಗಿಯೂ ಹೊರ ಹೊಮ್ಮಿದ್ದಾರೆ. ಈ ಹಿಂದೆ ರವಿ ಹಿಸ್ಟರಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ರಾವ್ ಇಲ್ಲಿಯೂ ನಾಯಕಿಯಾಗಿದ್ದಾರೆ. ಅವರದ್ದಿಲ್ಲಿ ಕೂಲಿಕಾರರ ಹೆಣ್ಣು ಮಗಳ ಡಿಗ್ಲಾಮ್ ಪಾತ್ರ. ಈ ದಿನಮಾನಕ್ಕೆ ತೀರಾ ಹೊಸತಾಗಿರೋ ಈ ಪಾತ್ರಕ್ಕಾಗಿ ಐಶ್ವರ್ಯಾ ಬಹಳಷ್ಟು ತಯಾರಿ ನಡೆಸಿಯೇ ನಟಿಸಿದ್ದಾರಂತೆ.

ಇದು ಇವತ್ತಿನ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟವಾದ ಕಥೆ ಹೊಂದಿರುವ ಚಿತ್ರ. ದೇಶದ ಬೆನ್ನೆಲುಬು ಅಂತೆಲ್ಲ ಕರೆಸಿಕೊಳ್ಳುವ ರೈತಾಪಿ ವರ್ಗದ ಕಷ್ಟ ಕಾರ್ಪಣ್ಯದೊಂದಿಗೇ ಒಂದು ಸಮೃದ್ಧ ಸಂಸ್ಕೃತಿಗೆ ಕನ್ನಡಿಯಾಗುವಂಥಾ ಕಥೆ ಇಲ್ಲಿದೆ. ಮಂಡ್ಯ ಸೀಮೆಯ ಹಳ್ಳಿಗಾಡಿನಲ್ಲಿಯೇ ಹುಟ್ಟಿ ಬೆಳೆದ ನಿರ್ದೇಶಕ ಮನು ಕೆ. ಶೆಟ್ಟಿಹಳ್ಳಿ ತಾನು ಕಂಡ ನೈಜ ಬದುಕಿನ ಚಿತ್ರಣವನ್ನೇ ಇಲ್ಲಿ ಬಿಚ್ಚಿಟ್ಟಿದ್ದಾರಂತೆ. ಇದರೊಂದಿಗೆ ಹಳ್ಳಿ ಬದುಕಿನ ಆಚಾರ ವಿಚಾರ, ಪೇಟೆಯ ಥಳುಕಿಗೆ ಬಲಿಯಾಗಿ ತಣ್ಣಗೆ ಮೂಲೆಗುಂಪಾಗುತ್ತಿರೋ ಆಚರಣೆಗಳತ್ತಲೂ ಇಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ಒಟ್ಟಾರೆಯಾಗಿ ರೈತರ ಬದುಕಿನ ಚಿತ್ರಣದೊಂದಿಗೆ ಹಳ್ಳಿ ಬದುಕಿನ ಚಿತ್ತಾರ ಮೂಡಿಸುವ ಅದ್ಭುತ ಕಥೆಯನ್ನು ರಣಹೇಡಿ ಒಳಗೊಂಡಿದೆ. ಅದೆಲ್ಲವೂ ಇದೇ ತಿಂಗಳ 29ರಂದು ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.

https://www.youtube.com/watch?v=kXf1qX9ay9w

Share This Article
Leave a Comment

Leave a Reply

Your email address will not be published. Required fields are marked *