ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿರುವ ‘ಕಿಸ್’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯುವ ಮನಸುಗಳ ಕಿಸ್ ಕಹಾನಿಗೆ ಫ್ಯಾಮಿಲಿ ಪ್ರೇಕ್ಷಕರೂ ಕೂಡಾ ಮನ ಸೋತಿದ್ದರಿಂದ ಅದು ಸೂಪರ್ ಹಿಟ್ ಆಗಿಯೂ ದಾಖಲಾಗಿದೆ. ತಾಜಾತನದಿಂದಲೇ ಎಲ್ಲರನ್ನು ಸೋಕಿದ ಈ ಚಿತ್ರಕ್ಕೆ ಮೊದಲ ದಿನದಿಂದ ಈ ಕ್ಷಣದವರೆಗೆ ಸಿಗುತ್ತಿರೋದು ಉತ್ತಮ ಪ್ರತಿಕ್ರಿಯೆಗಳೇ. ಶುರುವಿನಿಂದಲೂ ಈ ಸಿನಿಮಾವನ್ನು ಬೆಂಬಲಿಸುತ್ತಾ ಬಂದಿದ್ದ ರಾಕಿಂಗ್ ಸ್ಟಾರ್ ಯಶ್ ಬೇಗನೆ ವೀಕ್ಷಿಸೋದಾಗಿ ಹೇಳಿಕೊಂಡಿದ್ದರು. ಆ ಮಾತಿಗೆ ತಕ್ಕಂತೆ ನಾಳೆ ಅಂದರೆ ಮಂಗಳವಾರ ಬೆಳಗ್ಗೆ 10.20ಕ್ಕೆ ರಾಕಿಭಾಯ್ ಈ ಚಿತ್ರವನ್ನು ನೋಡಲಿದ್ದಾರೆ.
ನಿರ್ದೇಶಕ ಎ.ಪಿ. ಅರ್ಜುನ್ ಈ ಖುಷಿಯ ಸಂಗತಿಯನ್ನು ಖುದ್ದಾಗಿ ಜಾಹೀರು ಮಾಡಿದ್ದಾರೆ. ಈಗ ಕೆಜಿಎಫ್ ಛಾಪ್ಟರ್2 ಚಿತ್ರೀಕರಣದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಅತ್ತ ಅವರು ಮತ್ತು ಅಧೀರ ಪಾತ್ರಧಾರಿ ಸಂಜಯ್ ದತ್ ನಡುವಿನ ಕದನಕ್ಕೆ ಅಖಾಡ ಸಿದ್ಧಗೊಂಡಿದೆ. ಅದೆಲ್ಲದರ ನಡುವೆಯೂ ಬಿಡುವು ಮಾಡಿಕೊಂಡಿರೋ ಯಶ್ ಕಿಸ್ ನೋಡಲು ನಿರ್ಧರಿಸಿದ್ದಾರೆ. ಈ ಮೂಲಕ ಅವರು ಕಿಸ್ ಚಿತ್ರತಂಡಕ್ಕೆ ಮತ್ತೊಮ್ಮೆ ಬೆಂಬಲ ನೀಡಿದ್ದಾರೆ. ರಾಕಿಭಾಯ್ ಸಿನಿಮಾ ನೋಡಿ ಯಾವ ಅಭಿಪ್ರಾಯ ವ್ಯಕ್ತಪಡಿಸಬಹುದೆಂಬ ಬಗ್ಗೆ ಎ.ಪಿ ಅರ್ಜುನ್ ಸೇರಿದಂತೆ ಚಿತ್ರತಂಡಕ್ಕೆ ಕುತೂಹಲವಿದೆ.
ಅಷ್ಟಕ್ಕೂ ರಾಕಿಂಗ್ ಸ್ಟಾರ್ ಕಿಸ್ ಶುರುವಾದ ಕ್ಷಣದಿಂದಲೇ ಬೆಂಬಲಕ್ಕೆ ನಿಂತಿದ್ದರು. ಅವರೇ ಟ್ರೇಲರನ್ನೂ ಬಿಡುಗಡೆಗೊಳಿಸಿದ್ದರು. ಆ ಟ್ರೇಲರ್ ಮೂಡಿ ಬಂದಿರೋ ರೀತಿ ಮತ್ತು ಅದರಲ್ಲಿನ ಫ್ರೆಶ್‍ನೆಸ್ ಮನಸಾರೆ ಕೊಂಡಾಡಿದ್ದರು. ಇದೀಗ ಅವರು ಕಿಸ್ ಅನ್ನು ಕಣ್ತುಂಬಿಕೊಳ್ಳುವ ಕ್ಷಣಗಳು ಹತ್ತಿರ ಬಂದಿವೆ. ಇಂಥಾ ಬೆಂಬಲದೊಂದಿಗೆ ಬಿಡುಗಡೆಗೊಂಡಿರೋ ಕಿಸ್ ಗೆದ್ದಿದೆ. ಬಿಡುಗಡೆಯಾಗಿ ವಾರಗಳು ಕಳೆಯುತ್ತಲೇ ಹೊಸ ಹುಮ್ಮಸ್ಸಿನಿಂದ ಪ್ರದರ್ಶನ ಕಾಣುತ್ತಿದೆ. ದಸರಾ ನಿಮಿತ್ತವಾಗಿ ಸಾಲು ಸಾಲು ರಜೆಯೂ ಕೂಡಾ ಕಿಸ್ ಪಾಲಿಗೆ ವರದಾನವಾಗಿ ಮಾರ್ಪಟ್ಟಿದೆ. ಭರ್ಜರಿ ಕಲೆಕ್ಷನ್ನಿನೊಂದಿಗೆ ಕಿಸ್ ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿಕೊಂಡಿದೆ.