ಎರಡು ವರ್ಷದ ಹಿಂದೆಯೇ ನಸುನಕ್ಕಿದ್ದಳು ‘ಗೀತಾ’!

Public TV
1 Min Read

ಬೆಂಗಳೂರು: ಒಂದು ಸಿನಿಮಾ ರೂಪುಗೊಳ್ಳೋದರ ಹಿಂದೆ ನಾನಾ ಘಟ್ಟಗಳಿರುತ್ತವೆ. ಹೇಳಲಾರದಂಥಾ ಪಡಿಪಾಟಲುಗಳೂ ಇರುತ್ತವೆ. ದಿನ, ತಿಂಗಳುಗಳಲ್ಲ; ವರ್ಷಗಟ್ಟಲೆ ಪಟ್ಟಾಗಿ ಕೂತು ಕಾವು ಕೊಡದಿದ್ದರೆ ಗಟ್ಟಿ ಕಥೆಯೊಂದು ರೂಪುಗೊಳ್ಳಲು ಸಾಧ್ಯವಾಗೋದಿಲ್ಲ. ಇದೀಗ ಭಾರೀ ಅಬ್ಬರದೊಂದಿಗೆ ಇದೇ ತಿಂಗಳ 27ರಂದು ಬಿಡುಗಡೆಗೆ ರೆಡಿಯಾಗಿರೋ ಗೀತಾ ಚಿತ್ರದ ಹುಟ್ಟಿನ ಹಿಂದೆಯೂ ಅಂಥಾದ್ದೇ ಪರಿಶ್ರಮಗಳ ಕಥೆಯಿದೆ. ಅಷ್ಟಕ್ಕೂ ಈಗ ಬಿಡುಗಡೆಯ ಹೊಸ್ತಿಲಲ್ಲಿರೋ ಗೀತಾ ಎರಡು ವರ್ಷದ ಹಿಂದೆಯೇ ಒಂದೆಳೆಯ ಕಥೆಯ ಮೂಲಕ ನಸುನಕ್ಕಿದ್ದಳು.

ಸಂತೋಷ್ ಆನಂದ್ ರಾಮ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ರಾಜಕುಮಾರದಲ್ಲಿ ಕೋ ರೈಟರ್, ಡೈರೆಕ್ಟರ್ ಆಗಿದ್ದವರು ವಿಜಯ್ ನಾಗೇಂದ್ರ. ಆ ಚಿತ್ರ ತೆರೆ ಕಂಡು ಸಾರ್ವಕಾಲಿಕ ದಾಖಲೆ ಮಾಡಿದ್ದೀಗ ಇತಿಹಾಸ. ಈ ರಾಜಕುಮಾರ ಚಿತ್ರಕ್ಕೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ವಿಜಯ್ ನಾಗೇಂದ್ರರಿಗೆ ಗೀತಾ ಚಿತ್ರದ ಒಂದೆಳೆ ಕಥೆ ಹೊಳೆದು ಅದಕ್ಕೊಂದಷ್ಟು ಸಿನಿಮಾ ರೂಪುರೇಷೆಗಳನ್ನೂ ನೀಡಿದ್ದರು. ಆಗ ವಿಜಯ್ ಅವರ ಮನಸಲ್ಲಿ ನಾಯಕನಾಗಿ ನೆಲೆಗೊಂಡಿದ್ದದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ!

ರಾಜಕುಮಾರ ಚಿತ್ರ ಬಿಡುಗಡೆಯಾಗುತ್ತಲೇ ವಿಜಯ್ ನಾಗೇಂದ್ರ ಗಣೇಶ್‍ರನ್ನು ಭೇಟಿಯಾಗಿ ಈ ಕಥೆಯನ್ನು ಹೇಳಿದ್ದರಂತೆ. ಅದನ್ನು ಕೇಳಿದಾಕ್ಷಣವೇ ಖುಷಿಗೊಂಡಿದ್ದ ಗಣೇಶ್ ನಟಿಸಲೂ ಒಪ್ಪಿಗೆ ಸೂಚಿಸಿದ್ದರು. ಹಾಗೆ ಹೊಳೆದ ಒಂದೆಳೆಯನ್ನು ಗೋಕಾಕ್ ಚಳವಳಿಯ ಬಗ್ಗೆ ಅಧ್ಯಯನ ನಡೆಸಿ, ಹಿರಿಯರಿಂದ ಮಾರ್ಗದರ್ಶನ ಪಡೆದು ಕಡೆಗೂ ಒಂದು ರೂಪಕ್ಕೆ ತರಲಾಗಿತ್ತು. ಇದರೊಂದಿಗೆ ಮಸ್ತ್ ಆಗಿರೋ ಪ್ರೇಮ ಕಥಾನಕವನ್ನು ಬ್ಲೆಂಡ್ ಮಾಡಿ ಗಟ್ಟಿ ಕಥೆಯೊಂದನ್ನು ಸಿದ್ಧಪಡಿಸಿಕೊಂಡ ವಿಜಯ್ ನಾಗೇಂದ್ರ ಚಿತ್ರೀಕರಣಕ್ಕಿಳಿದಿದ್ದರು. ಆ ನಂತರದ್ದೇನಿದ್ದರೂ ಸೆನ್ಸೇಷನಲ್ ಪಯಣ. ಹಾಗೆ ಸಾಗಿ ಬಂದಿರೋ ಗೀತಾ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಈ ಚಿತ್ರವನ್ನು ಕನ್ನಡ ಚಿತ್ರರಂಗದ ಯಶಸ್ವೀ ನಿರ್ಮಾಪಕ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *